ಮಡಿಕೇರಿ, ನ. 14: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ : 17690/2018 (ಜಿಎಂಎಫ್‍ಒಆರ್)ಕ್ಕೆ ಆಗಿರುವ ನಿರ್ದೇಶನದಂತೆ ಮಡಿಕೇರಿ ಪೂರ್ವ ಮೀಸಲು ಅರಣ್ಯದ (ಮಡಿಕೇರಿ ಈಸ್ಟ್ ಆರ್‍ಎಫ್) ಕರ್ಣಂಗೇರಿ ಗ್ರಾಮದ ಸರ್ವೆ ನಂ. 289 ಮತ್ತು ಇತರೆ ಸರ್ವೆ ನಂಬರ್‍ಗಳ ಅರಣ್ಯದ ಗಡಿ ಗುರುತಿಸುವ ಕಾರ್ಯ ಕೈಗೊಳ್ಳಬೇಕಾಗಿದೆ.

ಅದರಂತೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ತಾ. 15 ರಂದು (ಇಂದು) ಸರ್ವೆ ಕಾರ್ಯ ಕೈಗೊಳ್ಳಲಿದ್ದಾರೆ. ಮಡಿಕೇರಿ ನಗರದ ಮೈಸೂರು ರಸ್ತೆಯ ಚೈನ್‍ಗೇಟ್‍ನಿಂದ, ಗೌಡಸಮಾಜ ರಸ್ತೆ ಮಾರ್ಗವಾಗಿ, ಕನ್ನಂಡಬಾಣೆಗೆ ಹೋಗುವ ರಸ್ತೆ, ರಾಘವೇಂದ್ರ ದೇವಸ್ಥಾನ ರಸ್ತೆ ಮಾರ್ಗವಾಗಿ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳ ವಸತಿಗೃಹ ಮಾರ್ಗವಾಗಿ ಸರ್ವೆ ಕಾರ್ಯ ನಡೆಯಲಿದೆ. ಈ ಭಾಗಗಳಲ್ಲಿ ವಾಸವಿರುವ ಸಾರ್ವಜನಿಕರು ಸರ್ವೆ ಕಾರ್ಯ ಮಾಡುವ ಅಧಿಕಾರಿ ಮತ್ತು ಸಿಬ್ಬಂದಿಗಳ ಜೊತೆ ಸಹಕರಿಸುವಂತೆ ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.