ವೀರಾಜಪೇಟೆ, ನ. 14: ಇ ಆಡಳಿತ ಬೆಂಗಳೂರು, ಜಿಲ್ಲಾ ಹಾಗೂ ತಾಲೂಕು ಆಡಳಿತ ವತಿಯಿಂದ ವೀರಾಜಪೇಟೆ ಪುರಭವನದಲ್ಲಿ ಒಂದು ವಾರಗಳ ಕಾಲ ಆಧಾರ್ ಅದಾಲತ್ ಆಯೋಜಿಸಲಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದ ಅನ್ವಯ ಆಧಾರ್ ಅದಾಲತ್ ಕಾರ್ಯಕ್ರಮ ವನ್ನು ಇಂದಿನಿಂದ ತಾ. 17 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ನಡೆಸಲಾಗುತ್ತಿದೆ. ಸಾರ್ವಜನಿಕರು ಹೊಸ ಆಧಾರ್ ಕಾರ್ಡ್, ನೋಂದಣಿ, ತಿದ್ದುಪಡಿ, ವಿಳಾಸ ಬದಲಾವಣೆ, ಮೊಬೈಲ್ ನಂಬರ್ ಜೋಡಣೆ, ಇನ್ನು ಹಲವಾರು ಸಮಸ್ಯೆ ಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿ ಕೊಳ್ಳಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಮೂರು ಗಣಕಯಂತ್ರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಆಧಾರ್ ಜಿಲ್ಲಾ ಸಂಯೋಜಕ ಅಮ್ಮಾಟಂಡ ರಾಕೇಶ್ ಮಾತನಾಡಿ, ಆಧಾರ್ ಕಾರ್ಡ್ ಪಡೆಯಲು ಇಚ್ಚಿಸುವವರು ಮತದಾರರ ಗುರುತಿನ ಚೀಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ನಿವಾಸಿ ಪ್ರಮಾಣ ಪತ್ರ ಇತರೆ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಆದಾರ್ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.