ಕುಶಾಲನಗರ, ನ. 14: ನದಿ ತಟಗಳ ಗಡಿ ಗುರುತುಪಡಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ಸಂಪೂರ್ಣ ನಿರ್ಲಕ್ಷ್ಯ ತಾಳುತ್ತಿರುವ ಕಾರಣ ಜೀವನದಿ ಕಾವೇರಿ ಬಹುತೇಕ ಒತ್ತುವರಿಯಾಗು ವದರೊಂದಿಗೆ ಜಲಮೂಲಗಳು ನೇರವಾಗಿ ಕಲುಷಿತಗೊಳ್ಳಲು ಕಾರಣವಾಗುತ್ತಿದೆ. ಮೂಲ ಕಾವೇರಿಯಿಂದ ಕೊಡಗು-ಮೈಸೂರು ಗಡಿ ಭಾಗದ ತನಕ ನದಿ ಪಾತ್ರಗಳಲ್ಲಿ ಅಕ್ರಮವಾಗಿ ವಸತಿ, ವಾಣಿಜ್ಯ, ಕೈಗಾರಿಕೆ ಮುಂತಾದ ಚಟುವಟಿಕೆಗಳು ತಲೆ ಎತ್ತುತ್ತಿದ್ದು, ನದಿ ನೀರು ಕಲುಷಿತಗೊಳ್ಳುವದರೊಂದಿಗೆ ಬಳಕೆಗೆ ಯೋಗ್ಯವಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಅಂದಾಜಿನ ಪ್ರಕಾರ ಭಾಗಮಂಡಲದಿಂದ ಕುಶಾಲನಗರ ತನಕ ನದಿ ತಟದಲ್ಲಿ ಸಾವಿರಕ್ಕೂ ಅಧಿಕ ಅಕ್ರಮ ಶೆಡ್‍ಗಳು ಸೇರಿದಂತೆ ನೂರಾರು ಮನೆಗಳು ನಿರ್ಮಾಣಗೊಂಡು ನದಿ ಪಾತ್ರಗಳು ಸಂಪೂರ್ಣ ಒತ್ತುವರಿಯಾಗುತ್ತಿ ರುವದು ಇತ್ತೀಚಿನ ಬೆಳವಣಿಗೆ ಯಾಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ನದಿ ತೀರಗಳನ್ನು ಬಳಸುವದರೊಂದಿಗೆ ನಿಯಮ ಬಾಹಿರವಾಗಿ ವಾಣಿಜ್ಯ ಚಟುವಟಿಕೆಗಳು ತಲೆ ಎತ್ತುತ್ತಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮೌನ ತಾಳುತ್ತಿರುವ ಹಿನ್ನೆಲೆ ನದಿ ಮತ್ತು ನದಿ ಪಾತ್ರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗುವದರೊಂದಿಗೆ ಮುಂದಿನ ದಿನಗಳಲ್ಲಿ ಜಲ ಮೂಲಗಳು ಬಹುತೇಕ ಕಣ್ಮರೆ ಯಾಗುವ ಸಾಧ್ಯತೆ ಅಧಿಕಗೊಳ್ಳುವ ಆತಂಕ ಎದುರಾಗಿದೆ.

ಪ್ರಮುಖ ವಾಣಿಜ್ಯ ನಗರಿ ಯಾಗಿರುವ ಕುಶಾಲನಗರದ ಹೆಚ್ಚಿನ ಭಾಗ ಕಾವೇರಿ ನದಿಯಿಂದ ಅವೃತಗೊಂಡಿದ್ದು, ಒಂದೆಡೆ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿ ಒಡಲು ಸೇರುತ್ತಿದ್ದರೆ, ಇನ್ನೊಂದೆಡೆ ನದಿ ತಟಗಳು ಬಹುತೇಕ ಅಕ್ರಮವಾಗಿ ಖಾಸಗಿ ಜನರ ಪರಭಾರೆ ಯಾಗುತ್ತಿರುವದು ಕಂಡುಬಂದಿದೆ. ಕುಶಾಲನಗರದ ಸಮೀಪ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಳಿ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದ ಎದುರಿನಲ್ಲಿ ಖಾಸಗಿ ವ್ಯಕ್ತಿಯೊಬ್ಬ ನದಿಗೆ ಸಾವಿರಾರು ಲೋಡ್ ಮಣ್ಣು ತುಂಬಿ ಒತ್ತುವರಿ ಮಾಡುವದರೊಂದಿಗೆ ನಿಯಮಗಳನ್ನು ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದರೂ ಗ್ರಾ.ಪಂ. ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ತಪಾಸಣಾ ಗೇಟ್ ಮುಂಭಾಗದಲ್ಲಿ ಹೈಟೆನ್ಷನ್ ಲೈನ್ ಕೆಳಗಡೆ ಹೊರ ರಾಜ್ಯದ ವ್ಯಕ್ತಿಯೊಬ್ಬ ನದಿ ತಟಕ್ಕೆ ಮಣ್ಣು ತುಂಬಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ಪ್ರಾರಂಭಿಸಿರುವದು ಪಟ್ಟಣ ಪಂಚಾಯಿತಿ ಗಮನಕ್ಕೆ ಬಂದರೂ ಮೌನ ವಹಿಸಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ. ನದಿ ತಟದಲ್ಲಿ ಪ್ರಾರಂಭಗೊಂಡಿರುವ ಮಾರ್ಬಲ್ ಟೈಲ್ಸ್ ಮೂಲಕ ಸೃಷ್ಟಿಯಾಗುವ ಅಪಾಯಕಾರಿ ತ್ಯಾಜ್ಯಗಳು ನೇರವಾಗಿ ನದಿ ಒಡಲು ಸೇರಲು ಪ್ರಾರಂಭಗೊಂಡಿದೆ. ಈ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ಶೆಡ್ ಅಕ್ರಮವಾಗಿ ನಿರ್ಮಾಣಗೊಂಡಿದ್ದು, ಇದಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಯಾವದೇ ಅನುಮತಿ ಪತ್ರ ಪಡೆದಿಲ್ಲ ಎನ್ನುತ್ತಾರೆ ಪಂಚಾಯಿತಿ ಅಧಿಕಾರಿಗಳು. ಕುಶಾಲ ನಗರ ನಗರ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ಇದನ್ನು ತೆರವು ಗೊಳಿಸಲು ಕೂಡ ನಿರ್ಣಯ ಕೈಗೊಳ್ಳಲಾಗಿದ್ದರೂ ಇದು ಇನ್ನೂ ಅನುಷ್ಠಾನಗೊಂಡಿಲ್ಲ.

ಇನ್ನೊಂದೆಡೆ ಮಾರುಕಟ್ಟೆ ಬಳಿ ನದಿಗೆ ಬೃಹತ್ ಗಾತ್ರದ ಬಂಡೆಗಳನ್ನು ತುಂಬಿ ಒಳಚರಂಡಿ ಕಾಮಗಾರಿ ಹಾನಿಗೊಳಿಸುವದರೊಂದಿಗೆ ಅಕ್ರಮ ಶೆಡ್ ನಿರ್ಮಿಸಿ ವಾಹನಗಳ ಸರ್ವೀಸ್ ಸ್ಟೇಷನ್ ನಿರ್ಮಿಸಿ ಕಲುಷಿತ ತ್ಯಾಜ್ಯ ನದಿಗೆ ಹರಿಸುತ್ತಿದ್ದರೂ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೌನ ವಹಿಸಿರುವದು ಸಂಶಯಕ್ಕೆ ಎಡೆಮಾಡಿದೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಮಾತ್ರ ದಿವ್ಯಮೌನಕ್ಕೆ ಶರಣಾಗಿದ್ದಾರೆ. ಕುಶಾಲನಗರ ಪಟ್ಟಣದಲ್ಲಿ ಭಾರೀ ಸಾಮಥ್ರ್ಯದ ವಿದ್ಯುತ್ ಮಾರ್ಗಗಳ ಕೆಳಭಾಗದಲ್ಲಿ ಅಕ್ರಮವಾಗಿ ಕಲ್ಲುಬಂಡೆ ತುಂಬಿ ಶೆಡ್‍ಗಳ ನಿರ್ಮಾಣ ಕಾಮಗಾರಿಗಳು ರಾಜಾರೋಷವಾಗಿ ನಡೆಯುತ್ತಿದ್ದು, ನಿಯಮಾವಳಿಗಳನ್ನು ಉಲ್ಲಂಘಿಸಿ ದರೂ ಸಂಬಂಧಿಸಿದ ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ಅಶೋಕ್ ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಲವು ದೂರು ಗಳನ್ನು ಲಿಖಿತವಾಗಿ ಸಲ್ಲಿಸಲಾಗಿದೆ ಎಂದಿದ್ದಾರೆ.

ಈ ಬಗ್ಗೆ ದೂರುಗಳು ಬಂದಿದ್ದು ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದೆ ಎನ್ನುವ ಸಮಜಾಯಿಷಿಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಬರುತ್ತಿದೆಯೇ ಹೊರತು ಯಾವದೇ ನಿರ್ದಿಷ್ಟ ಕ್ರಮ ಜರುಗುತ್ತಿಲ್ಲ. ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಶಾಲನಗರ ನಗರ ಅಭಿವೃದ್ಧಿ ಪ್ರಾಧಿಕಾರದ ಪ್ರಬಾರ ಯೋಜನಾ ನಿರ್ದೇಶಕ ಶ್ರೀಶ ಅವರಲ್ಲಿ ‘ಶಕ್ತಿ’ ಪತ್ರಿಕ್ರಿಯೆ ಬಯಸಿದಾಗ ತಾನು ಸದÀ್ಯದಲ್ಲಿಯೇ ಇಂತಹ ಸ್ಥಳಗಳಿಗೆ ಭೇಟಿ ನೀಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನದಿ ಮತ್ತು ನದಿ ಪಾತ್ರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನದಿಗಳ ಎರಡು ಬದಿಗಳಲ್ಲಿ ಗರಿಷ್ಠ ಪ್ರವಾಹ ಮಟ್ಟದಿಂದ 500 ಮೀಟರ್ ಅಂತರದಲ್ಲಿ ಕೃಷಿ ಹಾಗೂ ತೋಟಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಹೊರತುಪಡಿಸಿ ಅಭಿವೃದ್ಧಿ ಕಾರ್ಯಗಳಾದ ವಸತಿ, ವಾಣಿಜ್ಯ, ಕೈಗಾರಿಕೆ ಮುಂತಾದ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಿ.ಆರ್. ಗಣೇಶನ್ ತಿಳಿಸಿದ್ದಾರೆ.

ಇತ್ತೀಚೆಗೆ ಕುಶಾಲನಗರದಲ್ಲಿ ಕಾವೇರಿ ಉಕ್ಕಿ ಹರಿದ ಸಂದರ್ಭ ತಗ್ಗು ಪ್ರದೇಶಗಳ ಹಲವು ಬಡಾವಣೆಗಳು ನೀರಿನಿಂದ ಮುಳುಗಿದ್ದು ಈ ಹಿನ್ನೆಲೆ ನದಿ ತಟದಿಂದ 300 ಮೀ. ಅಂತರದ ತನಕ ಯಾವದೇ ರೀತಿಯ ವಸತಿ, ವಾಣಿಜ್ಯ ಅಥವಾ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸದಂತೆ ವರದಿ ಸಿದ್ಧಪಡಿಸಿದ್ದು, ಇದನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿಯ ಹಿಂದಿನ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ್ದಾರೆ. ಜೀವನದಿ ಕಾವೇರಿಯ ನೀರು ಪ್ರಸಕ್ತ ಮೂಲದಿಂದಲೇ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದ್ದು ಜಿಲ್ಲೆಯ ವ್ಯಾಪ್ತಿಯಲ್ಲಿ ಬಿ, ಸಿ ದರ್ಜೆಗೆ ಇಳಿಯುತ್ತಿರುವದು ಆತಂಕದ ವಿಷಯವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ನದಿ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

- ಚಂದ್ರಮೋಹನ್