ಶ್ರೀಮಂಗಲ, ನ. 14: ಸುಮಾರು 30 ವರ್ಷದಿಂದ ಮುಚ್ಚಿ ಹೋಗಿದ್ದ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಪಯ್ಯಡ ಮಂದ್ನ್ನು ಮತ್ತೆ ತೆರೆಯಲು ತೀರ್ಮಾನಿಸಲಾಗಿದೆ. ಹೈಸೊಡ್ಲೂರು ಮಹಾದೇವ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಈ ಮಂದ್ನ್ನು ತಾ. 25 ರಂದು ತೆರೆದು ಅಲ್ಲಿ ಪುತ್ತರಿ ಹಬ್ಬ ಸಾಂಪ್ರದಾಯಿಕವಾಗಿ ನಡೆಯುವ ಪುತ್ತರಿ ಕೋಲ್ಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಗ್ರಾಮದ ಪಯ್ಯಡ ಮಂದ್ಗೆ ಭೇಟಿ ನೀಡಿ ಅಲ್ಲಿ ಪೂರ್ವಭಾವಿ ಸಭೆ ನಡೆಸಿದ ದೇವಸ್ಥಾನ ಸಮಿತಿ ಹಾಗೂ ಅಕಾಡೆಮಿಯ ಪದಾಧಿಕಾರಿಗಳು ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, ತಾ. 25 ರಂದು ಅಪರಾಹ್ನ 2 ಗಂಟೆಗೆ ಮಂದ್ ತೆರೆಯಲು ತೀರ್ಮಾನ ಕೈಗೊಂಡರು.
ಈ ಸಂದರ್ಭ ಮಾತನಾಡಿದ ಹೈಸೊಡ್ಲೂರು ಮಹಾದೇವÀ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಯವಂಡ ಮೋಹನ್ ಅವರು, ಕಳೆದ 30 ವರ್ಷದಿಂದ ಈ ಮಂದ್ ಮುಚ್ಚಿಹೋಗಿತ್ತು. ಇದನ್ನು ಕಳೆದ ವರ್ಷವೇ ತೆರೆಯುವ ಅಭಿಪ್ರಾಯವಿತ್ತು, ಆದರೆ ಮಂದ್ನ ಸಮೀಪವೇ ಮಹಾದೇವÀ ದೇವಸ್ಥಾನವಿದ್ದು, ದೇವರ ಅನುವಾದ ಪಡೆದು ತೆರೆಯಲು ನಿರ್ಧರಿಸಲಾಯಿತು. ಇದೀಗ ಈ ಮಂದ್ಗೆ ಮತ್ತೆ ಚಾಲನೆ ದೊರೆಯುತ್ತಿರುವದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ಪ್ರತೀ ಗ್ರಾಮದಲ್ಲಿ ಮಂದ್ಗಳನ್ನು ಹಿರಿಯರು ಸ್ಥಾಪಿಸಿದ್ದಾರೆ. ಮಂದ್ಗಳು ಕೊಡವ ಹಾಗೂ ಕೊಡವ ಭಾಷಿಗರ ಧಾರ್ಮಿಕ ಹಾಗೂ ಸಾಂಸೃತಿಕ ಕೇಂದ್ರವಾಗಿದೆ. ಇಂತಹ ಮಹತ್ವ ಇರುವ ಮಂದ್ಗಳನ್ನು ಯಾವದೇ ಕಾರಣಕ್ಕೆ ಮುಚ್ಚಬಾರದು.
ಅವುಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ನಡೆಯಬೇಕು ಹಾಗೂ ಅವುಗಳು ಜೀವಂತಿಕೆಯನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಯಾ ಗ್ರಾಮಸ್ಥರ ಪಾತ್ರ ಹಾಗೂ ಅಭಿಮಾನ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಹಿಂದಿನ ಅಕಾಡೆಮಿ ಅವಧಿಯಲ್ಲಿ ಹಲವಾರು ಮುಚ್ಚಿ ಹೋದ ಮಂದ್ಗಳನ್ನು ಮತ್ತೆ ತೆರೆದು ಸಾಂಪ್ರದಾಯಿಕ ಚಟುವಟಿಕೆ ನಡೆಸಲು ಕಾರ್ಯಕ್ರಮ ನಡೆದಿದೆ. ಹಾಗೆಯೇ ಇತರ ಕೆಲವು ಸಂಘಟನೆಗಳೂ ಸಹ ಮುಚ್ಚಿ ಹೋಗಿದ್ದ ಮಂದ್ನ್ನು ಪುನರ್ಜೀವನ ಗೊಳಿಸಿವೆ ಹಾಗೆಯೇ ಪ್ರಸಕ್ತ ಅಕಾಡೆಮಿಯ ಅವಧಿಯಲ್ಲಿ ಮಂದ್ಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಮಹಾದೇವ ದೇವಸ್ಥಾನ ತಕ್ಕರಾದ ಬಾನಂಗಡ ರಾಜಶೇಖರ್, ದೇವಸ್ಥಾನದ ಕಾರ್ಯದರ್ಶಿ ಮಂಡಂಗಡ ಎಂ. ಅಶೋಕ್, ಸದಸ್ಯರಾದ ಬಲ್ಯಮೀದೇರಿರ ಸಂಜು, ಹೊಟ್ಟೇಂಗಡ ಗಿರೀಶ್, ಅಕಾಡೆಮಿ ಸದಸ್ಯರಾದ ಚಂಗುಲಂಡ ಸೂರಜ್, ಅಜ್ಜಮಾಡ ಕುಶಾಲಪ್ಪ ಹಾಜರಿದ್ದರು.