ಶನಿವಾರಸಂತೆ, ನ. 13: ಟಿಪ್ಪು ಜಯಂತಿ ಹಿನ್ನೆಲೆ ಜಿಲ್ಲಾಧಿಕಾರಿ ಅವರ ಆದೇಶದನ್ವಯ ಪಟ್ಟಣದಲ್ಲಿ ಶನಿವಾರ ನಡೆಯಬೇಕಾಗಿದ್ದ ಸಂತೆ ಭಾನುವಾರ ನಡೆಯಿತು. ಭಾನುವಾರ ರಜೆಯ ದಿನವಾದ ಕಾರಣವೊ ಏನೋ ಸಂತೆಯಲ್ಲಿ ವ್ಯಾಪಾರಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಶೇ. 25 ರಷ್ಟು ಮಾತ್ರ ವ್ಯಾಪಾರಿಗಳು ಬಂದಿದ್ದರು. ಅಗತ್ಯ ವಸ್ತುಗಳ ಕೊರತೆಯಿಂದಲೊ ಎಂಬಂತೆ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿತ್ತು.
ಜಿಲ್ಲೆಯಲ್ಲೇ ಹೆಸರು ವಾಸಿಯಾದ ವಿಸ್ತಾರವಾದ ಸಂತೆ ಮಾರುಕಟ್ಟೆಯಲ್ಲಿ ಶನಿವಾರ ನಡೆಯುವ ಸಂತೆಗೆ ಶನಿವಾರಸಂತೆ ಹೋಬಳಿ, ಕೊಡ್ಲಿಪೇಟೆ ಹೋಬಳಿ, ಮಾತ್ರವಲ್ಲದೆ ನೆರೆಯ ಹಾಸನ ಜಿಲ್ಲೆಯ ಯಸಳೂರು ಹೋಬಳಿಯ ಜನರು ಬರುತ್ತಿದ್ದರು. ಕೂಲಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದು, ವಾರದ ದಿನಸಿ ತರಕಾರಿ ಇತ್ಯಾದಿಗಳನ್ನು ಶನಿವಾರ ಸಂತೆಯಲ್ಲೇ ಖರೀದಿ ಸುತ್ತಿದ್ದರು. ಶನಿವಾರ ಕಾರ್ಮಿಕರಿಗೆ ರಜಾ ದಿನ. ಆದರೆ ಭಾನುವಾರ ಕೆಲಸಕ್ಕೆ ಹೋಗಲೇ ಬೇಕು. ದುಡಿಮೆ ಬಿಟ್ಟು ಸಂತೆಗೆ ಬರುವಂತಿಲ್ಲ. ಉಳಿದವರಿಗೆ ಮದುವೆ ಇತ್ಯಾದಿ ಸಮಾರಂಭ ಗಳು. ಹಾಗಾಗಿ ಟಿಪ್ಪು ಜಯಂತಿ ಕಾರಣ ಸಂತೆಯ ದಿನ ಬದಲಾಗಿ ಜನಸಾಮಾನ್ಯರು ಪರದಾಡು ವಂತಾಯಿತು ಎಂದು ಕೆಲ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು.