ಕೂಡಿಗೆ, ನ. 11: ಕೊಡಗು ಜಿಲ್ಲೆಯಲ್ಲಿ ಕೂಡಿಗೆ ಎಂದೊಡನೆ ನೆನಪಾಗುವದು ಕೂಡಿಗೆ ಕೃಷಿ ಕ್ಷೇತ್ರದ ಆವರಣ. ಈ ಕ್ಷೇತ್ರದಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಎಂಟು ಇಲಾಖೆಗಳು ಇವೆ. ಇವು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಪಂಚಾಯ್ತಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲೇ ಹೆಸರುವಾಸಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರವು 1942 ರಲ್ಲಿ 3040 ಎಕರೆ ವಿಸ್ತೀರ್ಣವನ್ನು ಹೊಂದಿ, ಅಂದಿನ ಕೊಡಗು ಸರ್ಕಾರದಲ್ಲಿ ತನ್ನದೇ ಆದ ದಾಟಿಯಲ್ಲಿ ಪ್ರಗತಿ ಹೊಂದಿ ಜಿಲ್ಲೆ ಹಾಗೂ ರಾಜ್ಯ ಮತ್ತು ಅಂತರರಾಜ್ಯ ರೈತರಿಗೆ ತರಬೇತಿ ಮತ್ತು ಇನ್ನಿತರ (ಮೊದಲ ಪುಟದಿಂದ) ಉಪ ಕಸುಬುಗಳನ್ನು ರೈತರು ಅಳವಡಿಸಿಕೊಳ್ಳಲು ತರಬೇತಿಯನ್ನು ನೀಡಿರುವ ಹೆಮ್ಮೆ ಈ ಕ್ಷೇತ್ರಕ್ಕಿದೆ. ಇದೀಗ ಈ ಕ್ಷೇತ್ರವು 3040 ಎಕರೆ ವಿಸ್ತೀರ್ಣದಲ್ಲಿ ಬೇರೆ ಬೇರೆ ಇಲಾಖೆಗಳಿಗೆ ಹಾಗೂ ವಿದ್ಯಾಸಂಸ್ಥೆಗಳಿಗೆ ಜಾಗವನ್ನು ನೀಡುತ್ತಾ ಹೋದಂತೆ ಕೃಷಿ ಇಲಾಖೆಯ ಜಾಗವು ಹರಿದು ಹಂಚಿಹೋದಂತಾಗಿದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಕೊಡಗು ಜಿಲ್ಲೆಯ ಕುಶಾಲನಗರದ ದಿ. ಆರ್. ಗುಂಡುರಾವ್ ಅವರು ಪ್ರಥಮ ಬಾರಿಗೆ ರಾಜ್ಯದಲ್ಲಿಯೇ ಕ್ರೀಡಾ ಪ್ರೌಢಶಾಲೆಯನ್ನು ತೆರೆಯಲು ಕೃಷಿ ಇಲಾಖೆಯ 30 ಎಕರೆ ಪ್ರದೇಶವನ್ನು ಬಳಕೆ ಮಾಡಿಕೊಂಡರು. ಅದರಂತೆ ಇದರ ಜೊತೆಯಲ್ಲಿ ರೈತರಿಗೆ ಉಪಯುಕ್ತವಾಗುವಂತೆ ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ ಕೂಡಿಗೆ ಡೈರಿ, ರೈತ ಸಂಪರ್ಕ ತರಬೇತಿ ಕೇಂದ್ರ, ಗ್ರಾಮ ಸೇವಕರ ತರಬೇತಿ ಕೇಂದ್ರ ಹಾಗೂ ವಿವಿಧ ವಿದ್ಯಾಸಂಸ್ಥೆಗಳು, ವಸತಿ ನಿಲಯಗಳು ಈ ಕ್ಷೇತ್ರದ ಆವರಣದಲ್ಲಿ ಆರಂಭಗೊಂಡವು. ಕಳೆದ 10 ವರ್ಷಗಳಿಂದ ಕೃಷಿ ಇಲಾಖೆಯು 3040 ಎಕರೆ ಪ್ರದೇಶದಲ್ಲಿ ವಿವಿಧ ಇಲಾಖೆಗಳಿಗೆ ಮತ್ತು ವಿದ್ಯಾಸಂಸ್ಥೆಗಳಿಗೆ ಜಾಗವನ್ನು ನೀಡುತ್ತಾ 500 ಎಕರೆ ಪ್ರದೇಶವನ್ನು ಮಾತ್ರ ಉಳಿಸಿಕೊಂಡಿದೆ. ಈ 500 ಎಕರೆ ಪ್ರದೇಶದೊಳಗೆ ಆಡಳಿತ ಕಛೇರಿ, ಅಧಿಕಾರಿಗಳ ವಸತಿ ಕಟ್ಟಡ, ರೈತರ ತರಬೇತಿ ನೀಡುವ ಕೇಂದ್ರ, ರೈತರಿಗೆ ವಸತಿ ನಿಲಯ, ಮಹಿಳಾ ರೈತರ ವಸತಿ ನಿಲಯ, ಕೋಳಿ ಸಾಕಾಣಿಕಾ ಕೇಂದ್ರ, ಹಂದಿ ಸಾಕಾಣಿಕಾ ಕೇಂದ್ರ, ಜರ್ಸಿ ತಳಿ ಸಂವರ್ಧನ ಕೇಂದ್ರ, ಮಣ್ಣುಪರೀಕ್ಷಾ ಕೇಂದ್ರಗಳನ್ನು ಒಳಗೊಂಡಿದೆ. ಇದಿಷ್ಟು ಜಾಗವಿದ್ದರು ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರ, ರಾಜ್ಯಕ್ಕೆ ಬೇಕಾಗುವ ಭತ್ತದ ಬಿತ್ತನೆ ಬೀಜವನ್ನು ನೀಡುತ್ತಿದ್ದ ಈ ಕೇಂದ್ರ ಇದೀಗ ಅಧಿಕಾರಿಗಳಿಲ್ಲದೆ, ಅಭಿವೃದ್ಧಿ ಕಾರ್ಯಗಳು ನಡೆಯದೆ ನಲುಗಿದೆ. ಈ ಜಾಗವನ್ನು ಸರ್ಕಾರವು ವಿವಿಧ ಇಲಾಖೆಗಳಿಗೆ ಹಂಚುತ್ತಿದ್ದು, ಕೃಷಿ ಇಲಾಖೆಯೆ ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ.

ರಾಜ್ಯ ಸರ್ಕಾರಗಳು ಲಕ್ಷಗಟ್ಟಲೆ ಹಣವನ್ನು ರೈತರಿಗಾಗಿ ವಿನಿಯೋಗಿಸುತ್ತೇವೆ ಎಂದು ತಮ್ಮ ತಮ್ಮ ಅಧಿಕಾರವಾಧಿಯಲ್ಲಿ ಹೇಳುತ್ತಾ ಬಂದಿದ್ದರೂ ಕೊಡಗು ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸೇರಿದ ಭೂಮಿಯನ್ನು ಉಳಿಸುವತ್ತ ಗಮನಹರಿಸದೆ ಇರುವದು ಎದ್ದುಕಾಣುತ್ತಿದೆ. ಜಿಲ್ಲೆಯ ಮಹಿಳಾ ರೈತರಿಗೆ ಮತ್ತು ಪುರುಷ ರೈತರಿಗೆ ತರಬೇತಿ ನೀಡಲು ವ್ಯವಸ್ಥಿತವಾದ ಕಟ್ಟಡವಿದ್ದರೂ ಪ್ರಾಯೋಗಿಕವಾಗಿ ಮಾಹಿತಿ ನೀಡಲು ಕೃಷಿ ಭೂಮಿಯೇ ಇಲ್ಲದಂತಾಗಿದೆ. ರೈತರಿಗೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಗುಡಿ ಕೈಗಾರಿಕೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡುತ್ತಿದ್ದರೂ ಬೇರೆಡೆಗೆ ಕರೆದೊಯ್ದು ಮಾಹಿತಿ ನೀಡುವಂತಹ ಪರಿಸ್ಥಿತಿ ಇದೆ. ಕೊಡಗು ಸರ್ಕಾರವಿದ್ದಾಗ ಕೂಡಿಗೆಯು ರೈತರಿಗೆ ಮತ್ತು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರವಾಸಿ ಕೇಂದ್ರವಾಗಿದ್ದ ಈ ಕೇಂದ್ರವು ಇದೀಗ ಬೇರೆ ಬೇರೆ ಇಲಾಖೆಗಳಿಗೆ ಹಂಚಿ ಕೃಷಿತನವನ್ನೇ ಕಳೆದುಕೊಂಡು ಹಾಳು ಕೊಂಪೆಯಂತಾಗಿದೆ. ಹೆಸರಿಗೆ ಮಾತ್ರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಎಂದು ನಾಮ ಫಲಕ ಅಳವಡಿಸಿದ್ದರೂ, ಇರಬೇಕಾದ ಸೌಕರ್ಯಗಳು ಇಲ್ಲ.

ಕೃಷಿ ಕ್ಷೇತ್ರದ ಆವರಣದಲ್ಲಿರುವ ಕೃಷಿ ಕ್ಷೇತ್ರಗಳಾದ ತೋಟಗಾರಿಕೆ, ರೇಷ್ಮೆ ಇಲಾಖೆ ಕೇಂದ್ರಗಳು ಮುಚ್ಚುವ ಹಂತಕ್ಕೆ ತಲಪಿದೆ. ಆ ಕೇಂದ್ರಗಳಿಗೆ ನಿಗದಿಪಡಿಸಿದ ಜಾಗವನ್ನು ಅವರವರ ಸುಪರ್ದಿಗೆ ಇಟ್ಟುಕೊಳ್ಳಲು ಬೇಕಾಗುವಂತಹ ಅಧಿಕಾರಿ ವರ್ಗದ ನೇಮಕ ಮಾಡದೆ, ಬೇರೆ ಬೇರೆ ಇಲಾಖೆಗಳಿಗೆ ಜಾಗ ಹಸ್ತಾಂತರವಾಗುತ್ತಿದೆ.

ರೈತರಿಗೆ ತರಬೇತಿ ನೀಡಲು ಕಟ್ಟಡಗಳು ಇದೆಯೇ ವಿನಃ ತರಬೇತಿ ನೀಡಲು ಅಧಿಕಾರಿಗಳು ಹಾಗೂ ಕ್ಷೇತ್ರದ ಅಭಿವೃದ್ಧಿಯೂ ಆಗದೆ ಸರ್ಕಾರದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಇರುವ ಒಂದೊಂದು ಇಲಾಖೆಗೆ ಸಹಾಯಕ ನಿರ್ದೇಶಕರ ಹುದ್ದೆಯು ಇಲ್ಲದೆ, ಒಬ್ಬರನ್ನೇ ಎರಡು ಮೂರು ಸಹಾಯಕ ಹುದ್ದೆಗಳಿಗೆ ಜವಬ್ದಾರಿ ವಹಿಸಿ ಕಾರ್ಯನಿರ್ವಹಿಸುತ್ತಿರುವದು ಎಷ್ಟರ ಮಟ್ಟಿಗೆ ಸರಿಯಾಗಿದೆ. ಜಿಲ್ಲೆಯಲ್ಲಿ ಹೆಚ್ಚು ರೈತರೇ ಇದ್ದು, ಮೂರು ತಾಲೂಕುಗಳ ರೈತರಿಗೆ ತರಬೇತಿ ನೀಡಬೇಕಾಗದ ಈ ಕೇಂದ್ರ ಅವನತಿಯ ಹಾದಿಯಲ್ಲಿದ್ದು, ರೈತರಿಗೆ ಯಾವದೇ ರೀತಿಯಲ್ಲಿಯೂ ಉಪಯೋಗವಾಗದಂತಹ ಸ್ಥಿತಿ ತಲಪಿದೆ. ಕೆಲವು ಕಟ್ಟಡಗಳು ನಿರ್ವಹಣೆಯಿಲ್ಲದೆ, ಬೀಳುವ ಹಂತದಲ್ಲಿವೆ.

ಈಗಿರುವ 500 ಎಕರೆ ಜಾಗದಲ್ಲಿ ಸೈನಿಕ ಶಾಲೆಗೆ 150 ಎಕರೆ ಜಾಗವನ್ನು ನೀಡಲು ಸರ್ಕಾರ ಮುಂದಾಗಿದ್ದು, ಪೊಲೀಸ್ ತರಬೇತಿ ಕೇಂದ್ರವನ್ನೂ ಸಹ ತೆರೆಯಲು ಮುಂದಾಗಿರುವದು ತಿಳಿದುಬಂದಿದೆ. ಇಂತಹ ಸಂದರ್ಭ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದ್ದ ರೈತರ ಕೃಷಿ ಕ್ಷೇತ್ರವನ್ನು ಸರ್ಕಾರ ನಿರ್ಲಕ್ಷ್ಯಿಸದೆ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಈ ಕೃಷಿ ಕ್ಷೇತ್ರದ ಅಭಿವೃದ್ಧಿಯತ್ತ ನಡೆಸಲು ಮುಂದಾಗಿ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲು ಮುಂದಾಗಬೇಕು ಹಾಗೂ ಅಧಿಕಾರಿಗಳನ್ನು ನೇಮಕ ಮಾಡಿ ಇಲಾಖೆಯಿಂದ ಜಿಲ್ಲೆಯ ರೈತರಿಗೆ ಉಪಯುಕ್ತವಾಗುವಂತೆ ಇದರತ್ತ ಗಮನಹರಿಸಬೇಕಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ