ಮಡಿಕೇರಿ, ನ. 11: ಸಂತ್ರಸ್ತರಿಗೆ ಮನೆ, ಕಟ್ಟಡ ನಿರ್ಮಿಸುವ ಮೊದಲು ಸಂತ್ರಸ್ತರ ಮನಸ್ಸು ಮತ್ತು ಬದುಕು ಕಟ್ಟುವದು ಆದ್ಯತೆಯಾಗಬೇಕೆಂದು ಸಲಹೆ ನೀಡಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಡಾ.ವೈದೇಹಿ; ಕೊಡಗಿಗೆ ಒದಗಿದ ಮಹಾಸಂಕಟ ಸಂದರ್ಭ ಸ್ಥಳೀಯರು ಜೀವನ ಛಲ ಬೆಳೆಸಿಕೊಂಡ ರೀತಿ ಅನನ್ಯವಾದದ್ದು ಎಂದು ಶ್ಲಾಘಿಸಿದ್ದಾರೆ.ಕಾಲೂರು ಗ್ರಾಮದಲ್ಲಿ ಪ್ರಾಜೆಕ್ಟ್ ಕೂರ್ಗ್ ಮತ್ತು ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತ ಮಹಿಳೆಯರು ಯಶಸ್ವಿ ಕೌಶಲಾಭಿವೃದ್ಧಿ ಯೋಜನೆ ಯಡಿ ತಯಾರಿಸಿದ ವಿವಿಧ ಮಸಾಲೆ ಪದಾರ್ಥಗಳ ಕೂರ್ಗ್ ಫ್ಲೇವರ್ಸ್ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿ ಡಾ.ವೈದೇಹಿ ಮಾತನಾಡಿದರು.ಪ್ರಕೃತ್ತಿ ವಿಕೋಪ ಎಂಬದು ದಿಢೀರನೆ ಎದುರಾಗುವ ಯುದ್ಧದಂತೆ. ಆದರೆ ಕ್ಷಾತ್ರ ತೇಜಸಿನ ಕೊಡಗಿನ ಜನರು ಇಂಥ ಯುದ್ಧವನ್ನು ಆತ್ಮಸ್ಥೈರ್ಯದಿಂದ, ಎದುರಿಸಿ ಗೆಲವು ಸಾಧಿಸಿದ ರೀತಿ ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು. ಸಂಕಟ ಕಾಲದಲ್ಲಿ ಕಾಲೂರು ಗ್ರಾಮಸ್ಥರು ಒಗ್ಗಟ್ಟಿನಿಂದ ಎದುರಾದ ದುರಂತವನ್ನು ಎದುರಿಸಿ ಇದೀಗ ಮಸಾಲೆ ಪದಾರ್ಥಗಳ ಉತ್ಪನ್ನಗಳನ್ನು ಮಾರಾಟ ಮಾಡಿ ಹೊಸ ವೃತ್ತಿಜೀವನ ಕಟ್ಟಿಕೊಳ್ಳಲು ಮುಂದಾಗಿದ್ದು ಹೆಮ್ಮೆಯ ವಿಚಾರ ಎಂದರು.
ಜನರಿಗೆ ಬೇಕಾಗಿರುವದನ್ನು ನೀಡುವದಕ್ಕಿಂತ ಹಣ ಸಂಪಾದನೆಯ ಮಾರ್ಗೋಪಾಯಗಳನ್ನು ಕಲಿಸಿ ಕೊಡುವದು ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಕಾಲೂರು ಗ್ರಾಮದ ಮಹಿಳೆಯರಿಗೆ ಇಂಥ ಮಾರ್ಗವನ್ನು ತೋರಿಸಿದ ಪ್ರಾಜೆಕ್ಟ್ ಕೂರ್ಗ್, ಭಾರತೀಯ ವಿದ್ಯಾಭವನ ಅತ್ಯುತ್ತಮ ಕಾರ್ಯಯೋಜನೆ ಜಾರಿಗೊಳಿಸಿದೆ ಎಂದೂ ಡಾ.ವೈದೇಹಿ ಸಂತಸ ವ್ಯಕ್ತಪಡಿಸಿದರು.
ಶಾಸಕ ಬೋಪಯ್ಯ ಕರೆ
ಸಂತ್ರಸ್ತ ಮಹಿಳೆಯರಿಗಾಗಿ ಹೊಲಿಗೆ ತರಬೇತಿಯ ಎರಡನೇ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಸಂತ್ರಸ್ತರು ಎಲ್ಲಿಯೂ ನಿರಾಶರಾಗದೆ ತಮ್ಮತನ ಬಿಟ್ಟುಕೊಡದೆ ಸ್ವಾಭಿಮಾನ ಮತ್ತು ಸ್ವಾವಲಂಭಿಗಳಾಗಿ ಜೀವಿಸಬೇಕಾಗಿದೆ. ಕೊಡಗಿನ ಮೂಲ ಸಂಸ್ಕøತಿ, ಆಚಾರಗಳನ್ನು ಶಾಶ್ವತವಾಗಿ ರಕ್ಷಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸ ಬೇಕಾಗಿದೆ ಎಂದು ಕರೆ ನೀಡಿದರಲ್ಲದೆ, ಮಸಾಲೆ ಪದಾರ್ಥಗಳ ಗುಣಮಟ್ಟ ಕಾಪಾಡಿಕೊಳ್ಳುವ ಮೂಲಕ ಕಾಲೂರಿನ ಸಂತ್ರಸ್ತ ಮಹಿಳೆಯರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂಥ ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಕಾಲೂರಿನಲ್ಲಿರುವ ತರಬೇತಿ ಘಟಕಕ್ಕೆ ದೇವಸ್ತೂರಿನಿಂದ ಮಹಿಳೆ ಯರನ್ನು ಕರೆತರಲು ಕಾಲೂರಿನ ಜೀಪ್ ಮಾಲೀಕ, ಚಾಲಕರು ಉಚಿತ ಸೇವೆ ನೀಡಲು ಒಪ್ಪಿರುವದಾಗಿಯೂ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದರು. ಕಾಲೂರಿನ ಶ್ರೀ ಅಯ್ಯಪ್ಪ ದೇವಾಲಯದ ಜೀರ್ಣೋ ದ್ಧಾರಕ್ಕೆ ಎಲ್ಲಾ ರೀತಿ ಸಹಾಯ ನೀಡುವ ದಾಗಿಯೂ ಹೇಳಿದರು.
ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಸಂತ್ರಸ್ತರು ತಯಾರಿಸಿದ ಮಸಾಲೆ ಪದಾರ್ಥಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಮಡಿಕೇರಿ ಕೊಡವ ಸಮಾಜ ಸಂಕೀರ್ಣದಲ್ಲಿ ಕೊಠಡಿ ನೀಡುವದಾಗಿ ಹೇಳಿದರಲ್ಲದೇ ಜಾತಿ ಬೇಧವಿಲ್ಲದೆ ಸಂತ್ರಸ್ತ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ವಿದ್ಯಾರ್ಥಿ ವೇತನವನ್ನು ಕೊಡಗು ವಿದ್ಯಾನಿಧಿಯಿಂದ ಒದಗಿಸು ವದಾಗಿ ಘೋಷಿಸಿದರು. ಕೊಡಗು ವಿದ್ಯಾನಿಧಿ ಅಧ್ಯಕ್ಷ ಕೆ.ಪಿ. ಉತ್ತಪ್ಪ ಮಾತ ನಾಡಿ, ಎಲ್ಲರೂ ಸೂಕ್ತ ರೀತಿಯಲ್ಲಿ ಚಿಂತಿಸಿ ಪ್ರಕೃತಿ ಮಾತೆಯ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ಪ್ರಾಜೆಕ್ಟ್ ಕೂರ್ಗ್ ಸಂಚಾಲಕ ಬಾಲಾಜಿಕಶ್ಯಪ್ ಮಾಹಿತಿ ನೀಡಿ, ಕಾಲೂರಿನಲ್ಲಿ ಕೇವಲ 21 ದಿನಗಳ ಅಲ್ಪಾವಧಿಯಲ್ಲಿ ಸಂತ್ರಸ್ತ ಮಹಿಳೆಯರು 11 ರೀತಿಯ ಮಸಾಲೆ ಪದಾರ್ಥ ತಯಾರಿಸುವ ಮೂಲಕ ಹೊಸ ಚಮತ್ಕಾರ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಕೂರ್ಗ್ ಫ್ಲೇವರ್ಸ್ ಮಸಾಲೆ ಪದಾರ್ಥಗಳನ್ನು ಆಧುನಿಕ ಮಾರುಕಟ್ಟೆ ಜಾಲದಡಿ ಜಗತ್ತಿನಾದ್ಯಂತ ತಲಪಿಸಲು ಸಾಧ್ಯವಿದೆ ಎಂದರು.
ಮಸಾಲೆ ಪದಾರ್ಥ, ಹೊಲಿಗೆ ತರಬೇತಿಯಲ್ಲಿ ಕಾಲೂರು ಗ್ರಾಮದ 63 ಮಹಿಳೆಯರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದ ಅವರು, ಕಾಲೂರಿನ ಶಾಲೆಯ ಪುಟ್ಟ ಮೈದಾನದಲ್ಲೇ ಹಪ್ಪಳ ಒಣಗಿಸಿ, ಮಸಾಲೆ ಪದಾರ್ಥಗಳನ್ನು ತಯಾರಿಸಿದ ರೀತಿಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕಾಲೂರಿನ ಕಾಕೇರ ಕುಟುಂಬಸ್ಥರು ತಮ್ಮ ಕುಟುಂಬಕ್ಕೆ ಸೇರಿದ 20 ಸೆಂಟ್ ಜಾಗವನ್ನು ಮಹಿಳೆಯರ ತರಬೇತಿ ಕಾರ್ಯಗಳಿಗೆ ಬಳಕೆ ಮಾಡಲು ಉದ್ದೇಶಿತ ಕಟ್ಟಡಕ್ಕೆ ದಾನ ನೀಡುವದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಡಾ. ಎಂ.ಜಿ.ಪಾಟ್ಕರ್, ಸಲೀಲಾ ಪಾಟ್ಕರ್, ಮಾತನಾಡಿದರು. ಪ್ರಾಜೆಕ್ಟ್ ಕೂರ್ಗ್ ಸದಸ್ಯರಾದ ಕೆ.ಎಸ್.ರಮೇಶ್ ಹೊಳ್ಳ, ವೇದಮೂರ್ತಿ, ಅನಿಲ್ ಎಚ್.ಟಿ. ತರಬೇತುದಾರರಾದ ನೀನಾ ಆರ್.ಶೆಟ್ಟಿ, ಆಶ್ರಫುನ್ನೀಸಾ ಮತ್ತು ಉಡುಪಿಯ ಶ್ರೀನಿವಾಸ ಮೂರ್ತಿ ಹಾಜರಿದ್ದರು. ಸಾಹಿತಿ ನಾಗೇಶ್ ಕಾಲೂರು ನಿರೂಪಿಸಿ, ಗ್ರಾಮದ ಅಗತ್ಯತೆಗಳ ಮನವಿಯನ್ನು ಶಾಸಕರ ಮುಂದಿಟ್ಟರು. ಡಾ.ನಯನಾ ಕಶ್ಯಪ್ ವಂದಿಸಿದರು.