ಸುಂಟಿಕೊಪ್ಪ, ನ. 11: ಕೊಡಗಿನಲ್ಲಿ ಸೂಕ್ಷ್ಮ ಪರಿಸ್ಥಿತಿಯ ನಡುವೆ ಟಿಪ್ಪು ಜಯಂತಿ ಆಚರಣೆಯೊಂದಿಗೆ, ಎಲ್ಲವೂ ಶಾಂತಿಯುತವಾಗಿ ಕಳೆಯಿತು ಎಂದು ಪೊಲೀಸ್ ಇಲಾಖೆ ನಿಟ್ಟುಸಿರು ಬಿಡುವಷ್ಟರಲ್ಲಿ, ದುಷ್ಕರ್ಮಿಗಳು ಕಳೆದ ರಾತ್ರಿ ಆಟೋರಿಕ್ಷಾವೊಂದಕ್ಕೆ ಬೆಂಕಿ ಹಚ್ಚಿದ ಸಮಾಜ ಘಾತುಕ ದುಷ್ಕøತ್ಯ ಸುಂಟಿಕೊಪ್ಪದಲ್ಲಿ ಸಂಭವಿಸಿದೆ. ಇಲ್ಲಿನ ಮಧುರಮ್ಮ ಬಡಾವಣೆ ನಿವಾಸಿ ಆಟೋ ಚಾಲಕ ಶಿವಮಣಿ ಎಂಬವರು ನೀಡಿರುವ ದೂರಿನ ಮೇರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎಂದಿನಂತೆ ಕಳೆದ ರಾತ್ರಿ ಶಿವಮಣಿ ತನ್ನ ಆಟೋರಿಕ್ಷಾ (ಕೆ.ಎ. 12. ಬಿ 1716)ವನ್ನು ಮನೆ ಪಕ್ಕದ ರಸ್ತೆ ಬದಿ ನಿಲ್ಲಿಸಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿಗೆ ಮನೆಯಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಯಾರೋ ದುಷ್ಕರ್ಮಿಗಳು ರಿಕ್ಷಾಕ್ಕೆ ಬೆಂಕಿ ಹಚ್ಚಿರುವದು ಗೋಚರಿಸಿದೆ. ಬೆಂಕಿಯ ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ಸುಟ್ಟು ಹೋಗಿರುವ ದೃಶ್ಯ ಎದುರಾಗಿದೆ. ಈ ಕುರಿತು ಶಿವಮಣಿ ಸುಂಟಿಕೊಪ್ಪ ಠಾಣೆಗೆ ನೀಡಿರುವ ದೂರಿನ ಮೇರೆಗೆ ಪೊಲೀಸರು ಐಪಿಸಿ 435 ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು, ಸ್ಥಳ ಮಹಜರು ನಡೆಸಿ ಕಾನೂನು ಕ್ರಮಕೈಗೊಂಡಿದ್ದಾರೆ.
ಪ್ರತಿಭಟನೆ : ಈ ಸಂಬಂಧ ಸುಂಟಿಕೊಪ್ಪ ಸಂತೆ ದಿನವಾದ ಇಂದು ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಸಾರ್ವಜನಿಕರು ಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟನೆ ನಡೆಸಿದರು. ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಸುಂಟಿಕೊಪ್ಪದಲ್ಲಿ ಶಾಂತಿ ಕದಡಲು ಮುಂದಾಗಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದರು.ಬಿಜೆಪಿ ಆಕ್ರೋಶ: ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಕೆಲವು ಸಮಯದ ಹಿಂದೆ ಇದೇ ಬಡಾವಣೆಯ ಬಳಿ ಅನಿಲ್ ಎಂಬವರ ಆಟೋರಿಕ್ಷಾಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾಗಿ ವಿವರಿಸುತ್ತಾ, ಪೊಲೀಸರು ಆರೋಪಿಗಳನ್ನು ಬಂಧಿಸದಿರುವ ಕಾರಣ ಮತ್ತೆ ದುಷ್ಕøತ್ಯಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.