ವೀರಾಜಪೇಟೆ, ನ. 11: ಪ್ರಜಾಪ್ರಭುತ್ವದ ನೆಲೆಗಟ್ಟಿನ ಸಂವಿಧಾನದ ಆಶ್ರಯದಲ್ಲಿ ನಾವೆಲ್ಲರೂ ಜೀವನ ನಡೆಸಬೇಕಾಗಿದೆ. ಪ್ರತಿಯೊಬ್ಬರಿಗೂ ನ್ಯಾಯ ದೊರಕಲು ಮನೆ ಮನೆಗೆ ಕಾನೂನು ಅರಿವು ತಲಪುವಂತಹ ಕಾರ್ಯ ಇಂದು ನಡೆಯುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಡಿ.ಆರ್. ಜಯಪ್ರಕಾಶ್ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಆಶ್ರಯದಲ್ಲಿ ‘’ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ’’ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದ ಜಯಪ್ರಕಾಶ್ ಮಾತನಾಡಿ, 1987 ರಿಂದಲೂ ಕಾನೂನು ಸೇವಾ ಪ್ರಾಧಿಕಾರ ಪ್ರತಿಯೊಂದು ಕುಟುಂಬಕ್ಕೂ ಕಾನೂನಿನ ಅರಿವು ತಲಪುವ ಉದ್ಧೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಜನರಿಗೆ ಮನೆ ಬಾಗಿಲಿನ ಬಳಿಗೆ ಕಾನೂನಿನ ಅರಿವನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳು ವಂತಾಗಬೇಕು ಎಂದರು
ಪ್ರಧಾನ ಸಿವಿಲ್ ನ್ಯಾಯಾಧೀಶÀ ಶಿವಾನಂದ ಲಕ್ಷ್ಮಣ ಅಂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಚಿತ ಕಾನೂನಿನ ಅರಿವನ್ನು ಪಡೆದುಕೊಳ್ಳುವದು ಪ್ರತಿಯೊಬ್ಬ ನಾಗರಿಕರ ಹಕ್ಕು. ರಾಷ್ಟ್ರೀಯ ಕಾನೂನು ಸೇವೆಗಳ ಸಮಿತಿಯಿಂದ ಇನ್ನು 10 ದಿನಗಳ ಕಾಲ ಮನೆ ಮನೆಗೆ ಕಾನೂನು ಅರಿವು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಮಹಿಳೆ, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಕಾನೂನಿನ ಅರಿವನ್ನು ಪಡೆದುಕೊಳ್ಳು ವಂತಾಗಬೇಕು ಹಾಗೂ ನ್ಯಾಯಾಲಯಗಳಲ್ಲಿ ಕೌಟುಂಬಿಕ ವ್ಯಾಜ್ಯಗಳಿದ್ದಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರುವದಾಗಿ ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಮಾತನಾಡಿ, ಹಿಂದುಳಿದ ವರ್ಗ, ಕಾರ್ಮಿಕರು, ಹಾಗೂ ಸಮಾಜದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ದೊರಕಿಸಲು ಕಾನೂನು ಸೇವಾ ಸಮಿತಿ ಗ್ರಾಮಗಳಲ್ಲಿಯು ಕಾನೂನು ಅರಿವು ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದರು. ನ್ಯಾಯಾಲಯದ ಸಿಬ್ಬಂದಿ ಕೆ.ಬಿ. ಪ್ರದೀಪ್ ಸ್ವಾಗತಿಸಿ, ವಂದಿಸಿದರು.