ಮಡಿಕೇರಿ, ನ. 11: ಕೊಡಗಿನ ಜೆ.ಡಿ.ಎಸ್. ಪಕ್ಷದ ಕೆಲವು ಪ್ರಮುಖರು ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರನ್ನು ಹುಣಸೂರಿನಲ್ಲಿ ಭೇಟಿ ಮಾಡಿ ಕೊಡಗಿನ ರಾಜಕೀಯ ವಿದ್ಯಮಾನದ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.

ಪಕ್ಷದ ಹಿರಿಯ ಮುಖಂಡರಾದ ಕೆ.ಆರ್. ಸುರೇಶ್ ಮಾತನಾಡಿ, ಈ ಹಿಂದೆ ಕೊಡಗಿನಲ್ಲಿ ಜಿಲ್ಲಾಧ್ಯಕ್ಷರಾಗಿ ದ್ದವರು ಮತ್ತು ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿದ್ದವರು ಪಕ್ಷವನ್ನು ಸಂಘಟನೆ ಮಾಡುವಲ್ಲಿ ವಿಫಲರಾಗಿದ್ದು, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಆಗಿರುವದಿಲ್ಲ. ಯಂ.ಸಿ. ನಾಣಯ್ಯ ಅವರು ಪಕ್ಷ ಬಿಟ್ಟ ಮೇಲೆ ಅವರ ಹಲವಾರು ಜೆ.ಡಿ.ಎಸ್. ಬೆಂಬಲಿಗರು ತಟಸ್ಥರಾಗಿದ್ದು ಇದೀಗ ಮಾತಂಡ ರಮೇಶ್ ಮತ್ತು ಇತರರು ಪಕ್ಷ ಸಂಘಟನೆಗೆ ಆಸಕ್ತಿ ತೋರಿಸಿದ್ದು, ಸದ್ಯದಲ್ಲೇ ವೀರಾಜಪೇಟೆ ತಾಲೂಕಿನಲ್ಲಿ ಸಭೆ ಕರೆಯಬೇಕೆಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ವಕ್ತಾರ ಎಂ.ಟಿ. ಕಾರ್ಯಪ್ಪ ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿ ಕಾಂಗ್ರೆಸಿನ ಬೆಂಬಲಿಗರು ಜೆ.ಡಿ.ಎಸ್. ಪಕ್ಷವನ್ನು ಸೇರಲು ಬಯಸಿದ್ದು, ಪಕ್ಷ ಸಂಘಟನೆಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ವಿಶ್ವನಾಥ್ ಅವರಿಗೆ ತಿಳಿಸಿದರು.

ಕಾರ್ಮಾಡು ಸುಬ್ಬಣ್ಣ ಅವರನ್ನು ಕೊಡಗು ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡುವಂತೆ ಮತ್ತು ಉಸ್ತುವಾರಿ ಸಚಿವರೊಂದಿಗೆ ಜಿಲ್ಲೆಯ ಕಾರ್ಯಕರ್ತರ ಸಮಸ್ಯೆಯನ್ನು ಅರಿಯಲು ಕಾರ್ಯಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಕುಮಾರಸ್ವಾಮಿ ಅವರೆ ಮುಖ್ಯಮಂತ್ರಿಯಾಗಿದ್ದು ನಮ್ಮ ಪಕ್ಷವೇ ಅಧಿಕಾರದಲ್ಲಿದ್ದರು ಪಕ್ಷದ ಅಧ್ಯಕ್ಷರಿಲ್ಲದೆ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುತ್ತಿಲ್ಲ, ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲಾಗುತ್ತಿಲ್ಲ ಕೂಡಲೇ ಅಧ್ಯಕ್ಷರನ್ನು ನೇಮಿಸಿ, ಮುಂದಿನ ಲೋಕ ಸಭಾ ಚುನಾವಣೆಗೆ ಪಕ್ಷ ಸಂಘಟನೆಗೆ ಕಾರ್ಯಕರ್ತರ ಸಭೆ ಕರೆಯುವಂತೆ ಲೋಹಿತ್ ಗೌಡ ಅವರು ಮನವಿ ಮಾಡಿದರು.

ಕಾರ್ಮಾಡು ಸುಬ್ಬಣ್ಣ ಮಾತನಾಡಿ, ಪಕ್ಷವು ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿ ಸುವೆ ಎಂದರು.

ಪ್ರಮುಖರೊಂದಿಗೆ ಸುದೀರ್ಘ ಚರ್ಚೆ ಮಾಡಿದ ಹೆಚ್. ವಿಶ್ವನಾಥ್ ಅವರು ಈ ಎಲ್ಲಾ ವಿಚಾರವನ್ನು ಕೂಡಲೇ ಹೆಚ್.ಡಿ. ದೇವೇಗೌಡ ರೊಂದಿಗೆ ಮತ್ತು ಕುಮಾರಸ್ವಾಮಿ ಯವರೊಂದಿಗೆ ತಿಳಿಸಿ, ಉಸ್ತುವಾರಿ ಮಂತ್ರಿಗಳಾದ ಸಾ.ರಾ. ಮಹೇಶ್ ಅವರ ಸಲಹೆಯನ್ನು ಪಡೆದು ಮುಂದಿನ ತೀರ್ಮಾನ ಮಾಡುವದಾಗಿ ಹೇಳಿದರು.

ವೀರಾಜಪೇಟೆ ತಾಲೂಕಿನಲ್ಲಿ ಪಕ್ಷ ಬಲಿಷ್ಠಗೊಳಿಸಲು ಕಾರ್ಯಕರ್ತರ ಸಭೆಯನ್ನು ಸದ್ಯದಲ್ಲೆ ಕರೆಯಲಾಗುವದು ಮತ್ತು ಇದೀಗ ತಟಸ್ಥರಾಗಿದ್ದ ಹಿರಿಯ ಮುಖಂಡರು ಪಕ್ಷ ಸಂಘಟನೆಗೆ ಮುಂದಾಗಿರುವದು ಸ್ವಾಗತಾರ್ಹ ಮತ್ತು ನೂತನ ಜಿಲ್ಲಾಧಕ್ಷರ ನೇಮಕದ ಬಗ್ಗೆ ಕೂಡ ಚರ್ಚಿಸುವದಾಗಿ ತಿಳಿಸಿದರು.