ಮಡಿಕೇರಿ, ನ. 11: ತಾಲೂಕು ಬಾಲಭವನ ಸಮಿತಿ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಇತ್ತೀಚೆಗೆ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ 9 ರಿಂದ 16 ವರ್ಷದ 120 ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ವಹಿಸಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಹೊರಹಾಕಲು ಕಲಾಶ್ರೀ ಆಯ್ಕೆ ಶಿಬಿರ ಒಂದು ಮುಖ್ಯ ವೇದಿಕೆಯಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಮಕ್ಕಳು ಶಿಕ್ಷಣ ಕ್ಷೇತ್ರದೊಂದಿಗೆ ಶಿಕ್ಷಣೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದು ಬಹಳ ಮುಖ್ಯವಾಗಿದ್ದು, ಪೋಷಕರು ಮಕ್ಕಳನ್ನು ಬೆಂಬಲಿಸಲು ಕರೆ ನೀಡಿದರು.

ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆಗಳನ್ನು ಹೊರಹಾಕಲು ತಾಲೂಕು ಬಾಲವಿಕಾಸ ಸಮಿತಿಯು ಶ್ರಮಿಸುತ್ತಿದ್ದು, ಪೋಷಕರು ಹಾಗೂ ಶಿಕ್ಷಕರ ಬೆಂಬಲದೊಂದಿಗೆ ಮಕ್ಕಳು ಯಶಸ್ವಿಯ ಹಾದಿಯಲ್ಲಿ ಸಾಗಲು ಸಹಕಾರವಾಗುತ್ತದೆ ಎಂದು ತಿಳಿಸಿದರು.

ಪ್ರಬಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಮಾತನಾಡಿ, ಮಕ್ಕಳಲ್ಲಿ ಹಲವಾರು ಪ್ರತಿಭೆಗಳನ್ನು ನಾವು ದಿನನಿತ್ಯ ಕಾಣಬಹುದಾಗಿದೆ. ಇದನ್ನು ಪೋಷಕರು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದರು.

ಸ್ಪರ್ಧೆಯಲ್ಲಿ ಮಡಿಕೇರಿ ಭಾರತೀಯ ವಿದ್ಯಾಭವನ ಶಾಲೆಯ ಲಕ್ಷ್ಯ ಪಿ.ಎನ್., ಮೋಕ್ಷ ಪಿ.ಎನ್, ಸಂತ ಜೋಸೆಫರ ಶಾಲೆಯ ಮಾನಸ, ಮೌನ, ಸ್ನೇಹ ಮಧುಕರ್, ಮೂರ್ನಾಡು ಜ್ಞಾನಮಂದಿರ ಜ್ಯೋತಿ ವಿದ್ಯಾಸಂಸ್ಥೆಯ ವೈಷ್ಣವಿ ಹಾಗೂ ಮಡಿಕೇರಿ ನವೋದಯ ಶಾಲೆಯ ಡಿಪಿನ್ ಪಿ.ಎನ್. ವಿಜೇತರಾದರು.

ಸರ್ಕಾರಿ ಮಾದರಿ ಶಾಲೆಯ ಶಿಕ್ಷಕಿ ರೇವತಿ ರಮೇಶ್ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮಂಜುಳ, ಜಯಮ್ಮ, ಭಾರತಿ ರಮೇಶ್, ಸೌಮ್ಯ, ರಶ್ಮಿ, ಕೋಮಲ ಇವರು ಭಾಗವಹಿಸಿದ್ದರು.