ಶನಿವಾರಸಂತೆ, ನ. 11: ನುರಿತ ತಜ್ಞ ವೈದ್ಯರ ತಂಡ ಮನೆ ಬಾಗಿಲಿಗೆ ಬಂದು ವಿವಿಧ ಕಾಯಿಲೆಗಳ ತಪಾಸಣೆ ನಡೆಸುತ್ತಿರುವದು ಗ್ರಾಮೀಣ ಭಾಗದ ಜನತೆಗೆ ವರದಾನ ವಾಗಿದೆ ಎಂದು ಬೆಂಗಳೂರಿನ ಪಿ.ಎಂ.ಜೆ.ಎಫ್. 1ನೇ ಉಪ ರಾಜ್ಯಪಾಲ ನಾಗರಾಜ್ ಬೈರಿ ಅಭಿಪ್ರಾಯಪಟ್ಟರು.

ಸ್ಥಳೀಯ ಭಾರತಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಮೈಸೂರಿನ ಬಿ.ಜಿ.ಎಸ್. ಅಪಲೋ ಆಸ್ಪತ್ರೆ ಸಹಭಾಗಿತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಲಯನ್ ಜಯರಾಂ ಮಾತನಾಡಿ, ಸಂಸ್ಥೆ ಆರೋಗ್ಯ ತಪಾಸಣಾ ಶಿಬಿರ ದೊಡ್ಡ ಮಟ್ಟದಲ್ಲಿ ಆಯೋಜಿಸಿರುವದು ಜಿಲ್ಲೆಗೆ ಗೌರವ ತರುವ ಕಾರ್ಯ ಎಂದರು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಿ.ಕೆ. ಚಿಣ್ಣಪ್ಪ, ಡಾ. ಪೂರ್ಣಿಮಾ ಹಾಗೂ ಡಾ. ರಾಘವೇಂದ್ರ ಮಾತನಾಡಿ, ಶಿಬಿರದ ಉದ್ದೇಶ ಗ್ರಾಮೀಣ ಭಾಗದ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು, ಲಯನ್ಸ್ ಸಂಸ್ಥೆ ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎಸ್. ರವಿಕಾಂತ್ ಮಾತನಾಡಿ, ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವದು ಶಿಬಿರದ ಯಶಸ್ಸಿಗೆ ಸಾಕ್ಷಿಯಾಗಿದೆ. ಇದು ಸಂಸ್ಥೆ ಮತ್ತಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಎಂದರು.

ಬಿ.ಜಿ. ನಗರದ ಡಾ. ಎಂ.ಜಿ. ಶಿವರಾಂ, ಡಾ. ಟಿ.ಎಂ. ಮನೋಹರ್, ಲಯನ್ಸ್ ಉಪಾಧ್ಯಕ್ಷ ಎನ್.ಬಿ. ನಾಗಪ್ಪ, ಬಿ.ಸಿ. ಧರ್ಮಪ್ಪ, ಜಿ. ನಾರಾಯಣ ಸ್ವಾಮಿ, ಕಾರ್ಯ ದರ್ಶಿ ಚಂದ್ರಶೇಖರ್, ಸದಸ್ಯರು, ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎಂ. ಆನಂದ್ ಉಪಸ್ಥಿತರಿದ್ದರು.

ರಕ್ತದಾನ ಶಿಬಿರದಲ್ಲಿ 60 ಮಂದಿ ತಜ್ಞ ವೈದ್ಯರು ಸಂಶೋಧನಾ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗಳ ಅಧಿಕ ಮಂದಿ ಶಿಬಿರಾರ್ಥಿಗಳು ವಿವಿಧ ಕಾಯಿಲೆಗಳ ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ಔಷಧಿ ಪಡೆದರು. ಪದವಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಹೆಚ್.ಎಂ. ವಿವೇಕ್ ಮತ್ತು ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದರು.