ಕುಶಾಲನಗರ, ನ; 11: ಹುದುಗೂರು ಬಳಿ ಶನಿವಾರ ಬೆಳಗಿನ ವೇಳೆ ನಡೆದ ಚೂರಿ ಇರಿತ ಪ್ರಕರಣದ ಬಗ್ಗೆ ಪೊಲೀಸರಿಂದ ಉನ್ನತ ಮಟ್ಟದ ತನಿಖೆ ಚುರುಕುಗೊಂಡಿದೆ. ಘಟನೆಗೆ ಕಾರಣಕರ್ತರಾದ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹುದುಗೂರು ಬಳಿ ಸಿ.ಸಿ.ಕಿರಣ ಎಂಬಾತನಿಗೆ ಇಬ್ಬರು ದುಷ್ಕರ್ಮಿಗಳು ಚೂರಿಯಲ್ಲಿ ಇರಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ತನಗೆ ಚಾಕು ಇರಿದು ಪರಾರಿಯಾಗಿರುವದಾಗಿ ಕಿರಣ ದೂರಿನಲ್ಲಿ ತಿಳಿಸಿದ್ದಾರೆ.ಘಟನೆ ತಕ್ಷಣ ಗಾಯಾಳು ಕಿರಣ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಗಿತ್ತು.ಇದೀಗ ಗಾಯಾಳು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹಿಂತಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ನಡುವೆ ಸ್ಥಳದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಕಾರೊಂದರಲ್ಲಿ ಬಂದ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿದೆ. ಚೂರಿ ಇರಿತಕ್ಕೆ ಒಳಗಾಗಿರುವ ಕಿರಣ ಖಾಸಗಿ ರೆಸಾರ್ಟ್ ಒಂದರಲ್ಲಿ ವ್ಯವಸ್ಥಾಪಕನಾಗಿದ್ದು ಈ ಘಟನೆಯ ಪೂರ್ವಾಪರಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಗಳ ಸುಳಿವಿಗಾಗಿ ತಂಡಗಳನ್ನು ರಚಿಸಲಾಗಿದೆ.
ಎರಡು ದಿನಗಳ ಹಿಂದೆ ಸಿದ್ದಾಪುರ ಕಡೆಯಿಂದ ಕುಶಾಲನಗರ ಕಡೆಗೆ ಚೂರಿ ಇರಿತಕ್ಕೆ ಒಳಗಾದ ಕಿರಣ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ವಾಹನಕ್ಕೆ ದಾರಿ ಬಿಡುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪರಸ್ಪರ ನಿಂದಿಸಿದ ಘಟನೆ ಕೂಡ ನಡೆದಿತ್ತು ಎಂದು ಪೊಲೀಸರ ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಪೊಲೀಸರು ದೂರವಾಣಿ ಸಂಪರ್ಕಗಳ ಮಾಹಿತಿ ಕಲೆ ಹಾಕುತ್ತಿದ್ದು ನಿಗೂಢ ಪ್ರಕರಣಕ್ಕೆ ಪ್ರಮುಖ ಕಾರಣ ಇನ್ನಷ್ಟೇ ಹೊರ ಬೀಳಬೇಕಾಗಿದೆ.