ಮಡಿಕೇರಿ, ನ. 10: ಇಂದು ಟಿಪ್ಪು ಜಯಂತಿಗೆ ಸಂಘ ಪರಿವಾರ ಸೇರಿದಂತೆ ಹಲವು ಸಂಘಟನೆಗಳ ತೀವ್ರ ವಿರೋಧದ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆಗಳಲ್ಲಿ ಸಾಂಕೇತಿಕವಾಗಿ ಜಿಲ್ಲಾಡಳಿತದಿಂದ ಸರಕಾರದ ನಿರ್ದೇಶನದಂತೆ ಕಾರ್ಯಕ್ರಮ ನಡೆಸಲಾಯಿತು.ಜಿಲ್ಲೆಯ ಮೂವರು ಶಾಸಕರ ಸಹಿತ ಪ್ರತಿರೋಧ ವ್ಯಕ್ತಪಡಿಸಿದ 214 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು. ಟಿಪ್ಪು ಜಯಂತಿ ವಿರೋಧಿ ಸಮಿತಿ ಕರೆ ನೀಡಿದ್ದ ಸ್ವಯಂ ಬಂದ್ಗೆ ಜಿಲ್ಲೆಯ ಎಲ್ಲೆಡೆ ಬೆಂಬಲ ವ್ಯಕ್ತವಾಯಿತು.ಮೂರು ಕಡೆಗಳಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿಗೆ ಕಪ್ಪು ವಸ್ತ್ರ ಸಹಿತ ತೀವ್ರ ವಿರೋಧವನ್ನು ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ವ್ಯಕ್ತಪಡಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪೊಲೀಸರಿಂದ ಬಂಧನಕ್ಕೆ ಒಳಗಾದರು. ಹೊರಗೆ ಪ್ರತಿಭಟನೆಗೆ ತಯಾರಿಯಲ್ಲಿದ್ದ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾದರು.ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ವ್ಯಾಪ್ತಿಯಲ್ಲಿ ಮುಂಜಾನೆಯಿಂದಲೇ ಪೊಲೀಸ್ ಇಲಾಖೆ ಕ್ರಿಪ್ರ ಕಾರ್ಯಪಡೆಯ ಶಸ್ತ್ರ ಸಜ್ಜಿತ ರಕ್ಷಣಾ ಸಿಬ್ಬಂದಿ ಸಹಿತ ನಾಕಾ ಬಂಧಿಯೊಂದಿಗೆ ಕಟ್ಟೆಚ್ಚರ ವಹಿಸಿತ್ತು. ಇನ್ನು ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದ ಹೊರಾಂಗಣದ ಅಲ್ಲಲ್ಲಿ ಭದ್ರತಾ ಕ್ರಮದೊಂದಿಗೆ ನಸುಕಿನಿಂದಲೇ ಕಣ್ಗಾವಲು ಎದುರಾಯಿತು.
ಸ್ವತಃ ಐಜಿ-ಡಿಸಿ ಪರಿಶೀಲನೆ
ಕೋಟೆ ಕಾರ್ಯಕ್ರಮ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಎಸ್ಪಿ ಡಾ. ಸುಮನ್ ಡಿ.ಪಿ. ಸಹಿತ ಪರಿಶೀಲನೆಯಲ್ಲಿ ನಿರತರಾಗಿದ್ದರೆ, ಐ.ಜಿ. ಶರತ್ಚಂದ್ರ ಅವರು ಡಿವೈಎಸ್ಪಿ ಸುಂದರರಾಜ್, ಇನ್ಸ್ಪೆಕ್ಟರ್ಗಳಾದ ಅನೂಪ್ ಮಾದಪ್ಪ, ಮೇದಪ್ಪ, ಭರತ್ ಮತ್ತು ಠಾಣಾಧಿಕಾರಿಗಳಾದ ಷಣ್ಮುಖ, ಚೇತನ್ ಸಹಿತ ಹೊರಗಿನಿಂದ ವ್ಯಾಪಕ ಭದ್ರತೆಯಲ್ಲಿ ಕಣ್ಗಾವಲು ಇರಿಸಿದ್ದು ಗೋಚರಿಸಿತು.
ಜನಪ್ರತಿನಿಧಿಗಳ ಆಗಮನ
ವಿವಿಧ ಇಲಾಖೆ ಅಧಿಕಾರಿಗಳು
(ಮೊದಲನೇ ಪುಟದಿಂದ) ಜನಪ್ರತಿನಿಧಿಗಳು ನಿಷೇಧಾಜ್ಞೆ ನಡುವೆ ಅತ್ತ ಹೆಜ್ಜೆ ಇರಿಸತೊಡಗುವ ದರೊಂದಿಗೆ, ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ, ಸುನಿತಾ ಹಾಗೂ ನಗರಸಭಾ ಸದಸ್ಯರುಗಳಾದ ಅಮೀನ್ ಮೊಯಿಸ್ಸಿನ್, ಮನ್ಸೂರ್, ಪೀಟರ್, ಜುಲೇಕಾಬಿ, ನಾಮಕರಣ ಸದಸ್ಯರಾದ ಉಸ್ಮಾನ್, ಉದಯಕುಮಾರ್ ಮೊದಲಾದವರು ಬಂದು ಆಸೀನರಾದರು.
ನಗರದ ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ ಹಾಗೂ ಲಕ್ಷ್ಮಿ, ಸವಿತಾ ರಾಖೇಶ್, ಅನಿತಾ ಪೂವಯ್ಯ, ಶಿವಕುಮಾರಿ, ಕೆ.ಎಸ್. ರಮೇಶ್, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಉಮಾ ಪ್ರಭು ಮುಂತಾದವರು, ಮಾಜೀ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಮತ್ತಿತರರೊಂದಿಗೆ ಆಸೀನಗೊಂಡರು.
ಚಕಮಕಿ ನಡುವೆ ಪ್ರವೇಶ
ಬಿಜೆಪಿಯ ಒಂದಿಷ್ಟು ಪ್ರತಿನಿಧಿಗಳೊಂದಿಗೆ ಕೋಟೆಯತ್ತ ಧಾವಿಸಿದ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ದ್ವಾರದಲ್ಲೇ ಜನಪ್ರತಿನಿಧಿಗಳಿಗೆ ಆಮಂತ್ರಣ ನೀಡಿಲ್ಲವೆಂದು ಪೊಲೀಸರನ್ನು ಆಕ್ಷೇಪಿಸುತ್ತಾ, ಮಾತಿನ ಚಕಮಕಿಯೊಂದಿಗೆ ಕಾರ್ಯಕ್ರಮ ಸಭಾಂಗಣ ಪ್ರವೇಶಿಸಿದರು. ಆ ಬೆನ್ನಲ್ಲೇ ಮಡಿಕೇರಿ ಕ್ಷೇತ್ರದ ಶಾಸಕರು ಹಾಗೂ ಸಭಾ ಅಧ್ಯಕ್ಷತೆ ವಹಿಸಬೇಕಿದ್ದ ಅಪ್ಪಚ್ಚು ರಂಜನ್ ಕೂಡ ಧಾವಿಸಿ ವೇದಿಕೆಯಲ್ಲಿ ಆಸೀನರಾದರು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಇದ್ದರು.
ಆಕ್ರೋಶದ ಚಾಟಿ: ಈ ವೇಳೆ ಆಹ್ವಾನಿತ ಪ್ರಮುಖರು ವೇದಿಕೆ ಅಲಂಕರಿಸಿದ ಬೆನ್ನಲ್ಲೇ ಎಂ.ಪಿ. ಸುನಿಲ್ ಸುಬ್ರಮಣಿ, ಧ್ವನಿವರ್ಧಕದ ಬಳಿ ಧಾವಿಸಿದರು. ಅಷ್ಟರಲ್ಲಿ ಜಿ.ಪಂ. ಸದಸ್ಯೆ ಚಂದ್ರಕಲಾ ಪ್ರಾರ್ಥನೆ ಹಾಗೂ ಸ್ವಾಗತಕ್ಕೆ ಅವಕಾಶ ನೀಡುವಂತೆ ಏರು ಧ್ವನಿಯಲ್ಲಿ ಹೇಳಿದರು. ಮರುಕ್ಷಣ ವೇದಕೆಯತ್ತ ಧಾವಿಸಿದರು. ಇತ್ತ ಸ್ವಾಗತದ ಅವಶ್ಯಕತೆ ತಮಗಿಲ್ಲವೆಂದೂ... ಟಿಪ್ಪು ಮತಾಂಧ... ಕೊಡಗಿನ ಜನರ ಹತ್ಯೆ ಮಾಡಿದವ... ಆತನ ಜಯಂತಿ ಆಚರಣೆ ಬೇಡವೆಂದು ಪ್ರತಿಯಾಗಿ ಮೇಲ್ಮನೆ ಸದಸ್ಯರು ಮಾತಿನ ಚಾಟಿ ಬೀಸಿದರು.
ಬಿಜೆಪಿ ಪ್ರತಿನಿಧಿಗಳು ಸರಕಾರ ಮತ್ತು ಟಿಪ್ಪು ವಿರೋಧಿ ಘೋಷಣೆ ಮೊಳಗಿಸಿದರೆ; ಇತರ ಜನಪ್ರತಿನಿಧಿಗಳು ಪರವಾಗಿ ಘೋಷಣೆ ಕೂಗುವದರೊಂದಿಗೆ ಇಡೀ ಸಭಾಂಗಣ ಗೊಂದಲದ ಗೂಡಾಯಿತು. ಮಧ್ಯೆ ಪ್ರವೇಶಿಸಿದ ಪೊಲೀಸ್ ಮತ್ತು ಜಿಲ್ಲಾಡಳಿತ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿ, ಶಾಸಕರ ಸಹಿತ ಬಿಜೆಪಿ ಜನಪ್ರತಿನಿಧಿಗಳನ್ನು ಸಭಾಂಗಣದಿಂದ ಹೊರಗೆ ಕರೆದೊಯ್ಯುವಲ್ಲಿ ಸಫಲರಾದರು. ಈ ವೇಳೆ ಶಾಸಕ ಅಪ್ಪಚ್ಚು ರಂಜನ್ ಸಹಿತ ಬಿಜೆಪಿ ಪ್ರತಿನಿಧಿಗಳು ಸರಕಾರ ಹಾಗೂ ಟಿಪ್ಪು ಜಯಂತಿ ವಿರುದ್ಧ ಆಕ್ರೋಶ ಹೊರ ಹಾಕುತ್ತಾ ಕಪ್ಪು ಪಟ್ಟಿ ಪ್ರದರ್ಶಿಸಿದರೆ, ಪರವಾಗಿದ್ದ ಇತರರು ಜಯಕಾರ ಮೊಳಗಿಸಿದರು. ಅಂತೂ ಕೇವಲ 25 ನಿಮಿಷಗಳಲ್ಲಿ ಇಡೀ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕೃಷಿ ಕ್ಷೇತ್ರ ಅಭಿವೃದ್ಧಿಗೆ ಟಿಪ್ಪು ಕೊಡುಗೆ
ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿ ಮೂರು ಬಾರಿ ಯುದ್ಧ ಮಾಡಿದ್ದರು. ಈ ಯುದ್ಧಗಳು ಆಂಗ್ಲೋ-ಮೈಸೂರು ಯುದ್ಧ ಎಂದೇ ಇತಿಹಾಸದಲ್ಲಿ ದಾಖಲಾಗಿವೆ ಎಂದು ವಾಗ್ಮಿ ಚಟ್ನಳ್ಳಿ ಮಹೇಶ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಮೂರನೇ ಮಹಾಯುದ್ಧದ ಸಂದರ್ಭದಲ್ಲಿ ಲಾರ್ಡ್ ಕಾರ್ನ್ ವಾಲಿಸ್ ಸೈನ್ಯದ ಬೆಂಗಾವಲನ್ನು ಕುಸಿಯುವಂತೆ ಮಾಡಿ, ಕೃಷಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ರೈತರ ಸಂಕಷ್ಟ ನಿವಾರಿಸಲು ರೇಷ್ಮೆ ಬೆಳೆ ಪರಿಚಯಿಸಿದರು ಎಂದು ಮಹೇಶ್ ನುಡಿದರು.
ಬ್ರಿಟಿಷ್ರ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದಲ್ಲಿ ನಲುಗುತ್ತಿದ್ದ ರಾಷ್ಟ್ರವನ್ನು ಅವರ ಕಪಿಮುಷ್ಟಿಯಿಂದ ಬಿಡಿಸಲು ಕನಸು ಕಂಡ ಕಾರಣಿಕ. ಬ್ರಿಟಿಷರೊಂದಿಗೆ ನಿರಂತರ ಸೆಣಸಿದ ಛಲಗಾರ. ಹಗಲಿರುಳು ಬ್ರಿಟಿಷರನ್ನು ದುಃಸ್ವಪ್ನದಂತೆ ಕಾಡಿದ ದೇಶ ಪ್ರೇಮಿಯಾಗಿದ್ದರು ಎಂದರು.
‘ಇಂದಿನ ಕೃಷ್ಣರಾಜ ಸಾಗರ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ರೇಷ್ಮೆ ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನ್ಗೆ ಸಲ್ಲುತ್ತದೆ. ಹಾಗೆಯೇ ನೂರಾರು ಕೆರೆಗಳನ್ನು ನಿರ್ಮಿಸಿ ಕುಡಿಯುವ ನೀರು ಮತ್ತು ಕೃಷಿಗೆ ಆದ್ಯತೆ ನೀಡಿದ್ದರು ಎಂದು ಮಹೇಶ್ ಸ್ಮರಿಸಿದರು.’
ಟಿಪ್ಪು ಪಾಳೆಗಾರಿಕೆ ಮತ್ತು ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸುತ್ತಿದ್ದರು, ಕೃಷಿ ವಾಣಿಜ್ಯಿಕರಣ ಜೊತೆಗೆ ಶೇ 100 ರಷ್ಟು ಪಾನ ನಿಷೇಧ ಮಾಡಿದ್ದರು. ಬಡ್ಡಿ ರಹಿತ ಸಾಲ, ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿಯೇ ಕಾಣಬಹುದು ಎಂದು ಹೇಳಿದರು. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಮತ್ತು ಸ್ವಾತಂತ್ರ್ಯ ನೀಡಲು ಶ್ರಮಿಸಿದ ಟಿಪ್ಪು ಸುಲ್ತಾನ್, ಜಾತ್ಯತೀತತೆಯ ಸಂಕೇತ ಎಂದು ಮಹೇಶ್ ಪ್ರತಿಪಾದಿಸಿದರು.
ರಾಷ್ಟ್ರದ ಹೈದರಾಬಾದ್ನ ನಿಜಾಮರು ಸೇರಿದಂತೆ ಹಲವರು ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಂಡು ರಾಜ್ಯಭಾರ ಮಾಡುತ್ತಿದ್ದರು, ಆದರೆ ಟಿಪ್ಪು ಇದಕ್ಕೆ ವಿರುದ್ಧವಾಗಿದ್ದ, ದೇಶದಲ್ಲಿ ತಳವೂರಲು ಪ್ರಯತ್ನಿಸುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ, ಜೊತೆಗೆ ರಾಕೆಟ್ ಕ್ಷಿಪಣಿ ನಿರ್ಮಾಣ ಮಾಡಿದ್ದರು ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿದ ಟಿಪ್ಪು. ಉಳುವವನೆ ಹೊಲದೊಡೆಯ ಎಂಬದನ್ನು ಪ್ರಥಮ ಬಾರಿಗೆ ಸಾರಿದ್ದರು. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು ಎಂದು ಮಹೇಶ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಜಿ.ಪಂ.ಸಿಇಒ ಪ್ರಿಯ, ಜಿ.ಪಂ. ಸದಸ್ಯರಾದ ಕೆ.ಪಿ. ಚಂದ್ರಕಲಾ, ಸುನಿತಾ, ಕುಮುದ ಧರ್ಮಪ್ಪ, ನಗರಸಭಾ ಸದಸ್ಯರಾದ ಜುಲೇಕಾಬಿ ಅಮಿನ್ ಮೊಹಿಸಿನ್, ಪೀಟರ್, ಮನ್ಸೂರ್, ಉದಯ ಕುಮಾರ್, ಉಸ್ಮಾನ್, ಹೆಚ್ಚುವರಿ ಜಿಲ್ಲಾಧಿಕಾರಿ ಗಳಾದ ಪ್ರವೀಣ್ ಕುಮಾರ್, ಜಗದೀಶ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್, ಕನ್ನಡ ಸಂಸ್ಕøತಿ ಇಲಾಖೆಯ ದರ್ಶನ್, ಧಾರ್ಮಿಕ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.