ಶನಿವಾರಸಂತೆ, ನ. 10: ಬೆಸೂರು ಪಂಚಾಯಿತಿ ವ್ಯಾಪ್ತಿಯ ಕೊಣಿಗನ ಹಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹತ್ತಿಕೊಂಡು ಮನೆ ಸಂಪೂರ್ಣ ನಾಶವಾದ ಘಟನೆ ನಡೆದಿದೆ.
ಕೊಣಿಗನಹಳ್ಳಿಯ ಶೀಟ್ ಮನೆಯೊಂದರಲ್ಲಿ ಕೂಲಿಕಾರ್ಮಿಕ ಕೆ.ಕೆ. ಪುಟ್ಟರಾಜ್, ಪತ್ನಿ ಹೇಮಾವತಿ, ಮಕ್ಕಳಾದ ಅಭಿನ್, ಗಗನ್ ನಾಲ್ವರು ವಾಸವಾಗಿದ್ದಾರೆ. ಶುಕ್ರವಾರ ರಾತ್ರಿ ಇಬ್ಬರು ಮಕ್ಕಳು ಅದೇ ಊರಿನಲ್ಲಿ ಅಜ್ಜಿ ಲಕ್ಷ್ಮಮ್ಮ ಅವರ ಮನೆಗೆ ಹೋಗಿದ್ದು, ಗಂಡ ಪುಟ್ಟರಾಜ್ ಸ್ನೇಹಿತನ ಮನೆಗೆ ಟಿ.ವಿ. ನೋಡಲು ಹೋಗಿದ್ದು, ಪತ್ನಿ ಹೇಮಾವತಿ ಅವರೊಬ್ಬರೆ ಇದ್ದರು. ರಾತ್ರಿ ಅಡುಗೆ ಮಾಡುತ್ತಿದ್ದಾಗ ರೆಗ್ಯುಲೇಟರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೇಮಾವತಿ ಮನೆಯಿಂದ ಹೊರ ಓಡಿ ಬಂದಿದ್ದು, ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹತ್ತಿಕೊಂಡು ಭಾರೀ ಶಬ್ದದೊಂದಿಗೆ ಸಿಲಿಂಡರ್ ಸಿಡಿದಿದ್ದು, ಮನೆ ಯೊಳಗಿದ್ದ 25 ಗ್ರಾಂ. ಚಿನ್ನಾಭರಣ, ಚೀಟಿ ಕರೆದಿದ್ದ ರೂ. 60 ಸಾವಿರ ಹಣ ಹಾಗೂ ಮನೆಯೊಳಗಿದ್ದ ಸಾಮಗ್ರಿಗಳೊಂದಿಗೆ ಮನೆ ಪೂರ್ತಿ ಯಾಗಿ ಸುಟ್ಟು ಕರಕಲಾಗಿದೆ. ಮನೆ ಯೊಳಗಡೆ ಯಾರೂ ಇಲ್ಲದ್ದರಿಂದ ಅದೃಷ್ಟವಶಾತ್ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ, ಸೋಮವಾರಪೇಟೆ ಗಜಾನನ ಗ್ಯಾಸ್ ಏಜೆನ್ಸಿ, ಪೊಲೀಸರು, ಕಂದಾಯ ಇಲಾಖೆಯವರು ಹಾಗೂ ಗ್ರಾ.ಪಂ. ಅಧ್ಯಕ್ಷರು ಆಗಮಿಸಿ ಪರಿಶೀಲಿಸಿದ್ದು, ಪೊಲೀಸ್ ದೂರು ದಾಖಲಾಗಿದೆ.