ಕೂಡಿಗೆ, ನ. 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಕೂಡುಮಂಗಳೂರು ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕೇಂದ್ರದ ಮಹಿಳಾ ಸದಸ್ಯರುಗಳಿಗೆ ವಿಚಾರಗೋಷ್ಠಿ ಆಯೋಜಿಸಲಾಗಿತ್ತು.
ಹೆಗ್ಗಡೆ ದಂಪತಿಯ ಆಶೀರ್ವಾದಗಳೊಂದಿಗೆ ನಡೆಸಲ್ಪಡುವ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳಲ್ಲಿ ಮಹಿಳೆಯರ ಜ್ಞಾನಾಭಿವೃದ್ಧಿಗಾಗಿ ಪ್ರತೀ ತಿಂಗಳಿಗೊಂದು ಬಾರಿ ಜ್ಞಾನವಿಕಾಸ ಕೇಂದ್ರದ ಸಭೆ ನಡೆಸಿ ಸಂಪನ್ಮೂಲ ವ್ಯಕ್ತಿಗಳಿಂದ ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಕೌಟುಂಬಿಕ ಸಲಹೆ ಇತ್ಯಾದಿ ನೀಡಲಾಗುವದು ಎಂದು ಮೇಲ್ವಿಚಾರಕ ರವಿಪ್ರಸಾದ್ ಹೇಳಿದರು.
ಸಮಾಜದ ಮುಖ್ಯವಾಹಿನಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕುಟುಂಬದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡುವಲ್ಲಿ ಮಹಿಳೆಯರು ಶಕ್ತರಾಗಿದ್ದಾರೆ ಎಂದರು.
ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಪದ್ಮಾ ಸಂಸ್ಕೃತಿ-ಸಂಸ್ಕಾರ ಬಗ್ಗೆ ಮಾಹಿತಿ ನೀಡಿದರು. ಸದಸ್ಯರ ಪ್ರತಿಭೆ ಹೊರಹೊಮ್ಮುವಂತೆ ಆಟವನ್ನು ಆಡಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ಒಕ್ಕೂಟದ ಅಧ್ಯಕ್ಷೆ ರಾಧ ಜ್ಞಾನವಿಕಾಸ ಕೇಂದ್ರ ನಡೆಸುವದರಿಂದ ಆಗಿರುವ ವೈಯಕ್ತಿಕ ಬದಲಾವಣೆ ಬಗ್ಗೆ ಅನಿಸಿಕೆ ವ್ಶಕ್ತಪಡಿಸಿದರು. ತಾಂತ್ರಿಕ ತರಬೇತಿ ಸಹಾಯಕಿ ಪ್ರಿಯದರ್ಶಿನಿ ಕೌಟುಂಬಿಕ ಸಾಮರಸ್ಯದ ಬಗ್ಗೆ ಸದಸ್ಯರಿಗೆ ತರಬೇತಿ ನೀಡಿದರು. ಸೇವಾಪ್ರತಿನಿಧಿ ನಿರ್ಮಲಾ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಕಮಲಾಕ್ಷೀ ಒಕ್ಕೂಟದ ಉಪಾಧ್ಯಕ್ಷೆ ಭೀನಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.