ಮಡಿಕೇರಿ, ನ. 10: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಕಾಲೂರು ಗ್ರಾಮದ ಪ್ರಕೃತ್ತಿ ವಿಕೋಪ ಸಂತ್ರಸ್ತರಿಗಾಗಿ ಆಯೋಜಿಸಿರುವ ಯಶಸ್ವಿ ಕೌಶಲ್ಯ ತರಬೇತಿ ಕೇಂದ್ರದಡಿಯ ಹೊಲಿಗೆ ತರಬೇತಿಯ ಎರಡನೇ ಘಟಕದ ಉದ್ಘಾಟನೆ ಮತ್ತು ಕಾಲೂರು ಗ್ರಾಮದ ಸಂತ್ರಸ್ತ ಮಹಿಳೆಯರು ತಯಾರಿಸಿದ ಮಸಾಲೆ ಪದಾರ್ಥಗಳ ಲೋಕಾರ್ಪಣೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಲೇಖಕಿ ಡಾ. ವೈದೇಹಿ ನೆರವೇರಿಸಲಿದ್ದಾರೆ.

ತಾ. 11 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಕಾಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ, ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಹಿರಿಯ ಸಾಹಿತಿ ನಾಗೇಶ್ ಕಾಲೂರು ಪಾಲ್ಗೊಳ್ಳಲಿದ್ದಾರೆ.

ಸಂತ್ರಸ್ತ ಮಹಿಳೆಯರೇ ಸೂಕ್ತ ತರಬೇತಿ ಪಡೆದು ತಯಾರಿಸಿದ ವಿವಿಧ ಮಸಾಲೆ ಪದಾರ್ಥಗಳನ್ನು ಕೂರ್ಗ್ ಪ್ಲೇವರ್ಸ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾಗುತ್ತದೆ.

ಅಂತೆಯೇ ವಿವಿಧ ದಾನಿಗಳು ನೀಡಿದ ಹೊಲಿಗೆ ಯಂತ್ರಗಳನ್ನು ಬಳಸಿ ಹೊಲಿಗೆ ತರಬೇತಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆ ಹೊಲಿಗೆ ತರಬೇತಿಯ ಎರಡನೇ ಘಟಕವನ್ನೂ ಪ್ರಾರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.