ಮಡಿಕೇರಿ, ನ. 9 : ಕೊಡಗು ಜಿಲ್ಲೆಯಲ್ಲಿ ಕೃಷಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಮಾದರಿ ಸಹಕಾರಿಗಳನ್ನು ಕಾಣಬಹುದಾಗಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶ್ಲಾಘಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಕೂರ್ಗ್ ಇಂಟರ್ ನ್ಯಾಷನಲ್ ಹೋಟೆಲ್‍ನಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ನಡೆದ ರಾಜ್ಯ ಮಟ್ಟದ ವಿಶೇಷ ಕಾರ್ಯಕ್ರಮ ಹಾಗೂ ಕೊಡಗು ಸಹಕಾರ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೃಷಿಪತ್ತಿನ ಸಹಕಾರ ಸಂಘಗಳ ಮೂಲಕ ನೀಡುವ ಸಾಲ ಅತ್ಯಂತ ಪ್ರಯೋಜನ ಕಾರಿಯಾಗಿದೆ. ಸಹಕಾರ ಸಂಘಗಳಲ್ಲಿ ಬಹಳ ಸುಲಭವಾಗಿ ಸಾಲ ಪಡೆಯಬಹುದಾಗಿದೆ. ಇದು ರೈತರಿಗೆ ಅನುಕೂಲವಾಗಿದೆ ಎಂದರು.
ಯುವ ಪೀಳಿಗೆ ಕೂಡ ಸಹಕಾರ ಸಂಘಗಳಲ್ಲಿ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುತ್ತಿ ದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್ ಮಾತನಾಡಿ ಸಹಕಾರ ಕ್ಷೇತ್ರಕ್ಕೆ 113 ವರ್ಷಗಳ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಸಹಕಾರ ಸಂಘಕ್ಕೆ ಬರುತ್ತಿರುವದು ಕಡಿಮೆಯಾಗುತ್ತಿದೆ ಎಂದರು.
ಜಿಲ್ಲೆಯ ಸಹಕಾರ ಸಂಘಗಳಲ್ಲಿ 250 ಕೋಟಿ ರೂ. ಚಿನ್ನಾಭರಣ ಸಾಲ ಮತ್ತು 520 ಕೋಟಿ ರೂ. ಇತರ ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ 85 ಸಾವಿರ ರೈತ ಕುಟುಂಬಗಳಿದ್ದು, ಒಟ್ಟು 36 ಸಾವಿರ ಮಂದಿ ಸಾಲ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಮಾತನಾಡಿ ಸಹಕಾರ ಸಂಘಗಳ ಬೆಳವಣಿಗೆ ಜಿಲ್ಲೆಗೆ ಸಹಕಾರಿಯಾಗಿದೆ. ಸಹಕಾರ ಕ್ಷೇತ್ರವು ವಿಶಾಲವಾಗಿದ್ದು, ತರಬೇತಿ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.
ಸಹಕಾರ ಕ್ಷೇತ್ರವು ಗ್ರಾಮೀಣ ಕೃಷಿಕರಿಗೆ ಅನುಕೂಲವಾಗಿದ್ದು, ಇದೊಂದು ವಿಶಾಲ ಕ್ಷೇತ್ರವಾಗಿದೆ. ಆ ನಿಟ್ಟಿನಲ್ಲಿ ತರಬೇತಿ ನೀಡುವ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದರು.
ಮಾಜಿ ಅಧ್ಯಕ್ಷ ಎಂ.ಪಿ. ಮುತ್ತಪ್ಪ, ಎಚ್.ಎಸ್. ಮುತ್ತಪ್ಪ, ಪಿ.ಜಿ.ಉತ್ತಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಲ್ಲಾರಂಡ ಮಣಿಉತ್ತಪ್ಪ, ಕನ್ನಂಡ ಸಂಪತ್, ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಎಂ.ಎನ್.ಕುಮಾರಪ್ಪ, ಪ್ರೇಮ ಸೋಮಯ್ಯ, ಇತರರು ಇದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಯೋಗೇಂದ್ರ ನಾಯಕ್ ನಿರೂಪಿಸಿದರು. ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿದರು. ನಿರ್ದೇಶಕ ರವಿಬಸಪ್ಪ ವಂದಿಸಿದರು.