ಮಡಿಕೇರಿ, ನ. 7: ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಪ್ರತಿಭಟನೆಯ ಕುರಿತು ನಾವು ಯಾವದೇ ನಿರ್ಧಾರಗಳನ್ನು ಕೈಗೊಳ್ಳುವದಿಲ್ಲ, ಬದಲಿಗೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಿರುವದಾಗಿ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ಅವರು, ಕೊಡಗಿನ ಜನತೆಯ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವ ಸರಕಾರದ ನಿರ್ಧಾರವನ್ನು ಖಂಡಿಸುವದಾಗಿ ತಿಳಿಸಿದರು.
ಟಿಪ್ಪುವಿನ ಚರಿತ್ರೆ, ಇತಿಹಾಸದ ಪುಟಗಳನ್ನು ತಿರುವಿದರೆ ಆತನ ಕರಾಳ ಮುಖದ ದರ್ಶನವಾಗುತ್ತದೆ, ಆದರೆ ಅದನ್ನು ಸ್ವೀಕರಿಸುವ ಮನಸ್ಥಿತಿ ಸರಕಾರಕ್ಕಿಲ್ಲ. ಕೊಡಗಿನ ದೇವಾಟ್ಪರಂಬುವಿನಲ್ಲಿ ಕೊಡವರ ಹತ್ಯೆ, ಭಾಗಮಂಡಲದಲ್ಲಿ ದೇವಾಲಯ ಭಗ್ನ ಸೇರಿದಂತೆ ನೂರಾರು ಸಾಕ್ಷಿಗಳು ಆತನ ಕರಾಳ ಮುಖವನ್ನು ವಿವರಿಸುತ್ತವೆ. ಆದರೂ ಸರಕಾರ ಆತನನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಿ ಆತನ ಜನ್ಮ ದಿನವನ್ನು ಆಚರಿಸಲು ಮುಂದಾಗಿರುವದು ಇತಿಹಾಸಕ್ಕೆ ಮಾಡುವ ಅಪಚಾರ ಎಂದು ಟೀಕಿಸಿದರು.
ಸರಕಾರದ ಕ್ರಮವನ್ನು ವಿಶ್ವಹಿಂದೂ ಪರಿಷದ್ ಉಗ್ರವಾಗಿ ಖಂಡಿಸುವದಲ್ಲದೆ, ಟಿಪ್ಪು ಜಯಂತಿ ವಿರೋಧಿ ಸಮಿತಿ ಹಮ್ಮಿಕೊಳ್ಳುವ ಪ್ರತಿಭಟನೆಯಲ್ಲಿ ತಮ್ಮ ಸಂಘಟನೆ ಭಾಗಿಯಾಗುವದಾಗಿ ಘೋಷಿಸಿದರು.
ವಿದ್ಯಾರ್ಥಿ ಪ್ರಮುಖ್ ವಿನಯ್ಕುಮಾರ್ ಮಾತನಾಡಿ, ತಾ. 9 ರಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಚೇತನ್, ಸೇವಾ ಪ್ರಮುಖ್ ಪಿ.ಜಿ. ಕಮಲ್, ಗೋರಕ್ಷಾ ಪ್ರಮುಖ್ ನಂದಕುಮಾರ್ ಹಾಗೂ ಮನುಕುಮಾರ್ ರೈ ಉಪಸ್ಥಿತರಿದ್ದರು.