ಸೋಮವಾರಪೇಟೆ, ನ.7: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಮನೆ ಬಾಗಿಲಿಗೆ ತಳಿರುತೋರಣ ಕಟ್ಟಿ, ಸಗಣಿಯ ಕುಪ್ಪೆಯ ಮೇಲೆ ಚೆಂಡು ಹೂವುಗಳನ್ನಿಟ್ಟು ದೀಪ ಬೆಳಗಿಸುವ ಮೂಲಕ ಹಬ್ಬವನ್ನು ಸ್ವಾಗತಿಸಲಾಯಿತು. ಇದರೊಂದಿಗೆ ಬಗೆಬಗೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು.

ಧನಲಕ್ಷ್ಮೀ ಪೂಜೆಯಂದು ಮನೆ, ಅಂಗಡಿಗಳಲ್ಲಿ ಧನಲಕ್ಷಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಅಂಗಡಿಗಳನ್ನು ಸಿಂಗರಿಸಿ ಮನೆಮಂದಿ ಹಾಗೂ ನೆಂಟರಿಷ್ಟರೊಂದಿಗೆ ಸಂಭ್ರಮದಿಂದ ಪೂಜೆ ನೆರವೇರಿಸಲಾಯಿತು.

ಹೂವಿಗೆ ಬೇಡಿಕೆ: ದೀಪಾವಳಿ, ಧನಲಕ್ಷ್ಮೀ ಪೂಜೆ, ಬಲಿಪಾಡ್ಯಮಿ ಹಿನ್ನೆಲೆ ಹೂವಿನ ಮಾರಾಟ ಜೋರಾಗಿ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ವಿವಿಧ ಬಗೆಯ ಹೂವುಗಳನ್ನು ತಂದು ಪಟ್ಟಣದಲ್ಲಿ ಮಾರಾಟ ಮಾಡಲಾಯಿತು. ಚೆಂಡು ಹೂವು ಮಾರಿಗೆ 50 ರೂ., ಸೇವಂತಿ ಹೂವು ಒಂದು ಮಾರಿಗೆ 60 ರೂಪಾಯಿಯಂತೆ ಭರ್ಜರಿಯಾಗಿ ವ್ಯಾಪಾರ ನಡೆಯಿತು.