ಸೋಮವಾರಪೇಟೆ, ನ.7: ಸರ್ಕಾರದ ಆದೇಶದಂತೆ ಆಚರಿಸಲ್ಪಡುವ ಟಿಪ್ಪು ಜಯಂತಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ ಉಪವಿಭಾಗಾಧಿಕಾರಿಗಳು, ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಸಿದ್ದಾರೆ. ಇದರೊಂದಿಗೆ ತಾ. 10ರ ಶನಿವಾರದಂದು ನಡೆಯುವ ಮೂರು ಸಂತೆಗಳನ್ನು ರದ್ದುಗೊಳಿಸಲಾಗಿದೆ.
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ಜವರೇಗೌಡ ಅವರು, ಸರ್ಕಾರಿ ನಿರ್ದೇಶನದಂತೆ ಕಾರ್ಯಕ್ರಮ ನಡೆಯಲಿದೆ. ತಾ. 10ರಂದು ಬೆಳಿಗ್ಗೆ 9 ಗಂಟೆಗೆ ಚನ್ನಬಸಪ್ಪ ಸಭಾಂಗಣದಲ್ಲಿ ಜಯಂತಿ ನಡೆಯಲಿದ್ದು, ಆಹ್ವಾನಿತರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವದು. ಇದರೊಂದಿಗೆ ಯಾವದೇ ಫ್ಲೆಕ್ಸ್- ಬ್ಯಾನರ್‍ಗಳಿಗೆ ಅವಕಾಶವಿಲ್ಲ ಎಂದರು.
ಕೊಡಗಿನವರು ವೀರರು, ಶೂರರು, ಕಲಿಗಳು, ಶಾಂತಿಪ್ರಿಯರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದ ಉಪವಿಭಾಗಾಧಿಕಾರಿಗಳು, ಶಾಂತಿಪ್ರಿಯರು ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ಒಂದು ವೇಳೆ ಶಾಂತಿಭಂಗವಾದರೆ ನಿರ್ದಾಕ್ಷಿಣ್ಯ ಕ್ರಮ ಖಚಿತ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿದ್ದ ಡಿವೈಎಸ್‍ಪಿ ಮುರಳೀಧರ್ ಮಾತನಾಡಿ, ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ಫೇಸ್‍ಬುಕ್, ವಾಟ್ಸಪ್‍ಗಳಲ್ಲಿ ಮತೀಯ ಭಾವನೆ ಕೆರಳಿಸುವ ಪೋಸ್ಟ್‍ಗಳನ್ನು ಹಾಕುವವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತಿದೆ. ಕಟ್ಟುನಿಟ್ಟಿನ ಕ್ರಮಕ್ಕೆ ಇಲಾಖೆಯ ಮೇಲಧಿಕಾರಿಗಳೇ ತಿಳಿಸಿದ್ದಾರೆ. ಯಾವದೇ ಟ್ರಾನ್ಸ್‍ಫರ್, ವಿಚಾರಣೆ ಇರುವದಿಲ್ಲ ಎಂದು ಭರವಸೆ ತುಂಬಿದ್ದಾರೆ ಎಂದರು.
ಸಂತೆಗಳು ರದ್ದು: ಟಿಪ್ಪು ಜಯಂತಿ ಹಿನ್ನೆಲೆ ತಾ. 10ರಂದು ತಾಲೂಕಿನ 3 ಸಂತೆಗಳನ್ನು ರದ್ದುಪಡಿಸಲಾಗಿದೆ. ಶನಿವಾರ ನಡೆಯುವ ಶನಿವಾರಸಂತೆ, ಕೂಡುಮಂಗಳೂರು ಮತ್ತು ಮಾದಾಪುರ ಸಂತೆಗಳನ್ನು ಮುಂದೂಡಲಾಗಿದೆ. ತಾ. 10ರಂದು ಗ್ರಾ.ಪಂ. ಸೇರಿದಂತೆ ಸರ್ಕಾರದ ಯಾವದೇ ಕಟ್ಟಡಗಳನ್ನು ಸಾರ್ವಜನಿಕ ಕಾರ್ಯಕ್ರಮಕ್ಕೆ ನೀಡದಂತೆ ಸೂಚನೆ ಕೊಡಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ತಿಳಿಸಿದರು.
ಸಭೆಯಲ್ಲೂ ಜಯಂತಿಗೆ ವಿರೋಧ: ಸಭೆಯ ಪ್ರಾರಂಭದಲ್ಲೇ, ಸಭಿಕರ ಆಸನದಲ್ಲಿದ್ದ ಟಿಪ್ಪುಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮತ್ತು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 4 ವರ್ಷದಿಂದಲೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗುತ್ತಲೇ ಇದೆ. ಈಗಲಾದರೂ ತಾವುಗಳು ಜಯಂತಿಯನ್ನು ರದ್ದುಪಡಿಸಲು ಮುಖ್ಯಮಂತ್ರಿಗೆ ಮನವಿ ಮಾಡಿ ಎಂದು ಅಧಿಕಾರಿಗಳಲ್ಲಿ ವಿನಂತಿಸಿದರು.
ವಿರೋಧದ ನಡುವೆಯೂ ಕಾರ್ಯಕ್ರಮ ನಡೆಸಿದರೆ ನಾವುಗಳು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿ ಸಭೆಯಿಂದ ಹೊರ ನಡೆಯಲು ಮುಂದಾದರು. ಸ್ವಲ್ಪ ಸಮಯ ಕುಳಿತುಕೊಳ್ಳಿ ಎಂದು ಡಿವೈಎಸ್‍ಪಿ ಅವರು ಹಲವಷ್ಟು ಬಾರಿ ಮನವಿ ಮಾಡಿದರೂ ಅಭಿಮನ್ಯುಕುಮಾರ್ ಮತ್ತು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಅವರುಗಳು ಸಭೆಯಿಂದ ನಿರ್ಗಮಿಸಿದರು.
ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, 4 ಮಂದಿ ಮಾತ್ರ ಸಾರ್ವಜನಿಕರು ಉಪಸ್ಥಿತರಿದ್ದರು. ಇವರುಗಳೂ ಸಹ ಟಿಪ್ಪು ಜಯಂತಿ ಆಚರಣೆ ಬಗ್ಗೆ ಯಾವದೇ ಅಭಿಪ್ರಾಯ ವ್ಯಕ್ತಪಡಿಸದೇ ಮೌನ ವಹಿಸಿದ್ದರು.
ಮೂರು ತಾಲೂಕುಗಳಲ್ಲಿ ಮಹಿಳಾ ಬಿಜೆಪಿಯಿಂದ ಪ್ರತಿಭಟನೆ
ಮಡಿಕೇರಿ, ನ. 7: ಕೊಡಗಿನ ಜನರ ಭಾವನೆಗಳಿಗೆ ವಿರುದ್ಧವಾಗಿ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಮೂರೂ ತಾಲೂಕುಗಳಲ್ಲಿ ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿರುವದಾಗಿ ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 8 ರಂದು ವೀರಾಜಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದರು
ಕೊಡಗಿನ ಜನತೆಯ ಭಾವನೆಗಳಿಗೆ ತೀವ್ರ ಘಾಸಿಯನ್ನುಂಟು ಮಾಡುವ ಟಿಪ್ಪು ಜಯಂತಿಯ ಆಚರಣೆ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಡೆಸಲಾಗುತ್ತಿದ್ದು, ಕೊಡಗಿನ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟುಮಾಡುವ ಆಚರಣೆÉಯನ್ನು ವಿರೋಧಿಸಿ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವದೆಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನೋವಿಗೆ ಓಗೊಡದೆ ಸೆಕ್ಷನ್‍ಗಳನ್ನು ಜಾರಿಗೊಳಿಸಿ, ಪೊಲೀಸ್ ಬಲ ಪ್ರಯೋಗಿಸಿ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇಂತಹ ಆಚರಣೆಗಳನ್ನು ಪ್ರಸ್ತುತ ಬುದ್ಧಿಜೀವಿಗಳು, ವಿಚಾರವಂತರು ಎನಿಸಿಕೊಂಡವರು ಮಾತ್ರ ಬೆಂಬಲಿಸುತ್ತಿದ್ದಾರೆ. ಟಿಪ್ಪು ಮಹಾನ್ ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಕೊಡಗಿನ ದೇವಟ್ ಪರಂಬುವಿನಲ್ಲಿ ನಡೆದ ನರಮೇಧದ ಘಟನೆಯ ನೋವು ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆ. ಆದರೆ ಬುದ್ದಿಜೀವಿಗಳು ಎನಿಸಿಕೊಂಡವರು ಇತಿಹಾಸದ ನೈಜಾಂಶವನ್ನು ಮರೆ ಮಾಚಿ ತಮ್ಮ ಮೂಗಿನ ನೇರಕ್ಕೆ ಇತಿಹಾಸವನ್ನು ಸೃಷ್ಟಿ ಮಾಡಿ ಜನರ ಮೇಲೆ ಬಲವಂತವಾಗಿ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಟಿಪ್ಪು ಜಾತ್ಯತೀತವಾದಿಯೇ ಆಗಿದ್ದರೆ ಮತಾಂತರ ಯಾಕೆ ಮಾಡಬೇಕಾಗಿತ್ತು, ಕನ್ನಡ ಅಭಿಮಾನಿಯೇ ಆಗಿದ್ದರೆ ಉರ್ದು ಮತ್ತು ಪರ್ಷಿಯನ್ ಭಾಷೆಯನ್ನು ತನ್ನ ಆಡಳಿತ ಭಾಷೆಯನ್ನಾಗಿ ಯಾಕೆ ಮಾಡಿಕೊಂಡ ಎಂದು ಯಮುನಾ ಚಂಗಪ್ಪ ಪ್ರಶ್ನಿಸಿದರು.
ತಾ. 10 ರಂದು ನಡೆಯುವ ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕೂಡ ಪಾಲ್ಗೊಳ್ಳಲಿದೆ ಎಂದರು. ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯಿಂದ ವಾದ, ವಿವಾದ, ಗೊಂದಲ, ಅಶಾಂತಿ ಸೃಷ್ಟಿಯಾಗುತ್ತದೆ ಎನ್ನುವ ಮಾಹಿತಿ ಇದ್ದರೂ ಸಚಿವೆ ಜಯಮಾಲ ಅವರು ಜಯಂತಿ ಆಚರಣೆಗೆ ಮುಂದಾಗಿದ್ದು ಯಾಕೆ ಎಂದು ಪ್ರಶ್ನಿಸಿದರು.
ಮಡಿಕೆÉೀರಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷೆ ಮಿನಾಜ್ ಪ್ರವೀಣ್ ಉಪಸ್ಥಿತರಿದ್ದರು.