(ತಾ. 6ರ ಸಂಚಿಕೆಯಿಂದ ಮುಂದುವರಿದದ್ದು)

ಮಡಿಕೇರಿ: ಬ್ರಿಟಿಷ್ ಒಪ್ಪಂದದ ಪ್ರಕಾರ ಕೊಡಗಿನ ಮೀಸಲು ಅರಣ್ಯ ಜಾಗವನ್ನು ಗುತ್ತಿಗೆಗೆ ಹೊಂದಿಕೊಂಡಿರುವ ವ್ಯಕ್ತಿ ಅಥವಾ ಸಂಸ್ಥೆ ಪ್ರತಿ ಎಕರೆ ಜಾಗಕ್ಕೆ ವಾರ್ಷಿಕ ಇಂತಿಷ್ಟು ಹಣವನ್ನು ಸರಕಾರಕ್ಕೆ ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿದೆ. ಶತಮಾನದ ಹಿಂದಿನ ತೆರಿಗೆ ಎಕರೆಯೊಂದಕ್ಕೆ ವರ್ಷಕ್ಕೆ ನಾಲ್ಕಾಣೆ ಆಗಿತ್ತು. ಅನಂತರದಲ್ಲಿ ದಶಕಗಳ ಹಿಂದೆ ಅದು ಆರೆಂಟು ರೂ. ಮಾರ್ಪಾಡುಗೊಂಡಿದ್ದರೂ, ಸಂಬಂಧಪಟ್ಟವರು ಯಾವದೇ ತೆರಿಗೆ ಪಾವತಿಸದಿರುವ ಆರೋಪವಿದೆ.

ಹೀಗಿದ್ದರೂ ಸರಕಾರ ಹಾಗೂ ಕಂದಾಯ ಇಲಾಖೆ ಎಸಗುತ್ತಾ ಬಂದಿರುವ ಪ್ರಮಾದಗಳಿಂದ ಸಂರಕ್ಷಿತ ಮೀಸಲು ಅರಣ್ಯ ಜಾಗ ಇದಾಗಿದ್ದರೂ ಕೇವಲ ರಬ್ಬರ್ ತೋಟದ ಹೆಸರಿನಲ್ಲಿ ಅನೇಕ ಕೈಗಳಿಗೆ ಮಾರಾಟಗೊಳ್ಳುವಂತಾಗಿದ್ದು ಅಚ್ಚರಿ ಮೂಡಿಸಿದೆ.

ಮರದ ಹಕ್ಕಿಗೆ ತಡೆ: ಈ ನಡುವೆ 12 ವರ್ಷಗಳ ಹಿಂದೆ ಕೇರಳ ಮೂಲದ ಗ್ಲಾಡಿಸ್ ಮ್ಯಾಥ್ಯೂ ಎಂಬವರು ಮಾಕುಟ್ಟ ರಬ್ಬರ್ ತೋಟವಿರುವ ಜಾಗ 66.54 ಎಕರೆಯನ್ನು ಡಾ. ಕೆ. ಮಧುಸೂದನ್ ಎಂಬವರಿಂದ ಖರೀದಿಸಿರುವದಾಗಿಯೂ, ಆ ಸಂಬಂಧ ತನಗೆ ದಾಖಲೆ ಪತ್ರ (ಆರ್.ಟಿ.ಸಿ.) ತನ್ನ ಹೆಸರಿನಲ್ಲಿ ಮಾಡಿಕೊಡುವಂತೆಯೂ ವೀರಾಜಪೇಟೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸುತ್ತಾರೆ. 2005-06ನೇ ಸಾಲಿನಲ್ಲಿ ಬೇಟೋಳಿ ಕಂದಾಯ ಅಧಿಕಾರಿಗಳ ಶಿಫಾರಸ್ಸು ಮೇರೆಗೆ ತಹಶೀಲ್ದಾರ್ ಕಚೇರಿಯಿಂದ ಆ ಮಹಿಳೆಗೆ ಆರ್.ಟಿ.ಸಿ. ಕೂಡ ಲಭಿಸಲಿದೆ!

ಅರಣ್ಯ ಇಲಾಖೆ ಪ್ರವೇಶ: ಈ ನಡುವೆ ವೀರಾಜಪೇಟೆ ಉಪ ವಿಭಾಗದ ಅರಣ್ಯಾಧಿಕಾರಿಗಳು; ಪ್ರಸಕ್ತ ಇರುವ ರಬ್ಬರ್ ತೋಟವು ಮೀಸಲು ಅರಣ್ಯ ಪ್ರದೇಶವಾಗಿರುವ ಹಿನ್ನೆಲೆ ಖಾತೆಯನ್ನು ವರ್ಗಾಯಿಸದಂತೆ ಆಕ್ಷೇಪಿಸುತ್ತದೆ. ಈ ವೇಳೆ ಗ್ಲಾಡಿಸ್ ಮ್ಯಾಥ್ಯೂ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ಸಂಬಂಧ ನ್ಯಾಯಾಲಯವು ವೀರಾಜಪೇಟೆ ತಹಶೀಲ್ದಾರ್‍ಗೆ ನಿರ್ದೇಶನ ನೀಡಿ ‘ಕಾನೂನಿನಡಿ’ ಕ್ರಮಕೈಗೊಳ್ಳುವಂತೆ ಆದೇಶಿಸಿದೆ. ಈ ನಡುವೆ ಸ್ವತಃ ವೀರಾಜಪೇಟೆ ತಹಶೀಲ್ದಾರರು ನ್ಯಾಯಾಲಯಕ್ಕೆ ಶಿಫಾರಸ್ಸಿನೊಂದಿಗೆ ಗ್ಲಾಡಿಸ್ ಮ್ಯಾಥ್ಯೂ ಮೇಲಿನ ಜಾಗ ಖರೀದಿಸಿದ್ದು, ಮಾಲೀಕತ್ವ ಹೊಂದಿದ್ದಾರೆ ಎಂದು ಉಲ್ಲೇಖಿಸಿರುವದು ಬೆಳಕಿಗೆ ಬಂದಿದೆ.

ಸಂಶಯಕ್ಕೆ ದಾರಿ: ಈ ಬೆಳವಣಿಗೆ ಬೆನ್ನಲ್ಲೇ ಅದುವರೆಗೆ ರಬ್ಬರ್ ತೋಟ ಮೀಸಲು ಅರಣ್ಯವೆಂದು ಪ್ರತಿಪಾದಿಸಿದ್ದ ಅರಣ್ಯಾಧಿಕಾರಿಗಳು ಮೌನಕ್ಕೆ ಜಾರುವದರೊಂದಿಗೆ ಈ ಸಂಬಂಧ ನ್ಯಾಯಾಲಯಕ್ಕೆ ಯಾವದೇ ತಕರಾರು ಸಲ್ಲಿಸದಿರುವದು ಸಾಕಷ್ಟು ಸಂಶಯಕ್ಕೆ ಕಾರಣವಾಗಲಿದೆ.

ಮತ್ತೊಂದು ತಿರುವು: ಈ ನಡುವೆ 2013ರಲ್ಲಿ ಮತ್ತೆ ಕೇರಳ ಮೂಲದ ಈ ಮಹಿಳೆ ಗ್ಲಾಡಿಸ್ ಮ್ಯಾಥ್ಯೂ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ, ಮಾಕುಟ್ಟ ಅರಣ್ಯ ವಲಯಾಧಿಕಾರಿ ಮುಖಾಂತರ ಶತಮಾನದ ಈ ರಬ್ಬರ್ ತೋಟದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೋರುತ್ತಾರೆ. ಅಷ್ಟರಲ್ಲಿ ಎಚ್ಚೆತ್ತುಕೊಂಡಿರುವ ಇಲಾಖೆ ಅಧಿಕಾರಿಗಳು ಮರಗಳನ್ನು ಕಡಿದು ಸಾಗಾಟಗೊಳಿಸಲು ಅವಕಾಶ ನಿರಾಕರಿಸುತ್ತದೆ. ಮಾತ್ರವಲ್ಲದೆ ಸಂಬಂಧಿಸಿದ ಮರಗಳು ಅರಣ್ಯ ಇಲಾಖೆಯ ಸ್ವತ್ತಾಗಿದ್ದು, ಜಾಗವು ಕೂಡ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಾದ್ದರಿಂದ ಮರಗಳನ್ನು ಕಡಿಯಲು ಅನುಮತಿ ನಿರಾಕರಿಸುತ್ತದೆ.

ಮತ್ತೆ ನ್ಯಾಯಾಲಯಕ್ಕೆ ದೂರು: ಈ ವೇಳೆ ಅರಣ್ಯಾಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಗ್ಲಾಡಿಸ್ ಮ್ಯಾಥ್ಯೂ; ವೀರಾಜಪೇಟೆ ತಹಶೀಲ್ದಾರರು ತನ್ನನ್ನು ಜಾಗ ಮಾಲೀಕರೆಂದು ಪರಿಗಣಿಸಿದ್ದರೂ, ಅರಣ್ಯಾಧಿಕಾರಿಗಳು ಜಾಗದಲ್ಲಿರುವ ಮರ ತೆರವಿಗೆ ಅಡ್ಡಿ ಉಂಟುಮಾಡಿ ಆರ್ಥಿಕ ನಷ್ಟಕ್ಕೆ ಕಾರಣರಾಗುತ್ತಿದ್ದಾರೆ ಎಂದು ದೂಷಿಸುತ್ತಾರೆ.