ಮಡಿಕೇರಿ, ನ. 7: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಅಭಿವೃದ್ಧಿಗಾಗಿ ಅಲ್ಲಿನ ಭಕ್ತಜನ ಸಂಘವು ಕೈಗೊಂಡಿರುವ ಕೆಲಸ ಕಾರ್ಯಗಳನ್ನು ನಿನ್ನೆ ಜರುಗಿದ ಮಹಾಸಭೆಯಲ್ಲಿ ಶ್ಲಾಘಿಸುವದ ರೊಂದಿಗೆ, ದೇವಾಲಯಕ್ಕೆ ಸೇರಿರುವ ಜಾಗದ ಅತಿಕ್ರಮಣ ತೆರವಿಗೆ ಆದ್ಯತೆ ನೀಡುವಂತೆ ನಿರ್ಣಯಿಸಲಾಯಿತು. ಅಲ್ಲದೆ, ನೂತನವಾಗಿ ರಚನೆಗೊಂಡಿ ರುವ ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತ ಜನ ಸಂಘ ಜಂಟಿಯಾಗಿ ಸಮನ್ವಯ ಸಾಧಿಸುವ ಮೂಲಕ ಇನ್ನಷ್ಟು ಅಭಿವೃದ್ಧಿ ನಡೆಸುವಂತೆ ಸಭೆ ತೀರ್ಮಾನಿಸಿತು.

ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಬಿ. ಜೋಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯು ಅಭಿವೃದ್ಧಿಗೆ ಯಾವದೇ ಅನುದಾನ ನೀಡದಿರುವ ಕಾರಣ; ಇಲಾಖೆಯ ಅಧೀನದಿಂದ ಮರಳಿ ನಾಡಿನ ಜನತೆ ಹಿಂಪಡೆದು ದೇವಾಲಯವನ್ನು ಸ್ವತಂತ್ರವಾಗಿ ಮುನ್ನಡೆಸಬೇಕೆಂಬ ಆಗ್ರಹವೂ ಕೆಲವರಿಂದ ವ್ಯಕ್ತವಾಯಿತು.

ಅಲ್ಲದೆ ದೇವಾಲಯದ ಕಾಡು ಸೇರಿದಂತೆ ಯಾವದೇ ಜಾಗವು ಯಾರಿಂದಲೇ ಅತಿಕ್ರಮಣವಾದರೂ, ರಾಜಕೀಯ ಸಹಿತ ಯಾರೊಬ್ಬರ ಪ್ರಭಾವಕ್ಕೆ ಮಣಿಯದೆ ಅಂತಹ ಅತಿಕ್ರಮಣ ತೆರವುಗೊಳಿಸಲು ಅಗತ್ಯ ಕ್ರಮ ವಹಿಸಬೇಕೆಂದು ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಯಿತು.

ಅಭಿವೃದ್ಧಿ ಕೆಲಸ : ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಆಧುನಿಕ ವ್ಯವಸ್ಥೆಯ ಅಡುಗೆ ಕೋಣೆ ಯೊಂದಿಗೆ, ಅಗತ್ಯ ಪರಿಕರಗಳನ್ನು ರೂಪಿಸಿರುವ ಬಾಬ್ತು ರೂ. 21 ಲಕ್ಷ ಮೊತ್ತದ ಕೆಲಸ ನಿರ್ವಹಿಸಲಾಗಿದೆ. ದೇವಾಲಯ ಮುಖ್ಯದ್ವಾರಕ್ಕೆ ದಾನಿ ದೇವರಗುಂಡ ಹಿತಾಂಶ ಎಂಬವ ರಿಂದ ರೂ. 5 ಲಕ್ಷ ಕಾಮಗಾರಿ ಮುಂದುವರಿದಿದೆ. ದಾನಿ ನೆರವಂಡ ಸುಜಯ್ ಎಂಬವರು ದೇಗುಲ ಪರಿಸರ ಹೂದೋಟಕ್ಕೆ ರೂ. 70 ಸಾವಿರ ಕಲ್ಪಿಸಿದ್ದಾರೆ.

ಶತಮಾನೋತ್ಸವ ಭವನ : ದೇವಾಲಯದ ಭಕ್ತಜನ ಸಂಘವು ತನ್ನ 100 ವರ್ಷಗಳನ್ನು ಪೂರೈಸಿರುವ ಪ್ರಸಕ್ತ ಪರ್ವಕಾಲದಲ್ಲಿ, ಭಕ್ತರಿಗಾಗಿ ದೇವಾಲಯ ಹಿಂಭಾಗ ಸುಸಜ್ಜಿತ ಭೋಜನಗೃಹವನ್ನು ಈ ಸಾಲಿನ ಶತಮಾನೋತ್ಸವ ಭವನವಾಗಿ ನಿರ್ಮಿಸಲು ಯೋಜನೆ ರೂಪು ಗೊಂಡಿದೆ. ಅಲ್ಲದೆ ಕಕ್ಕಬ್ಬೆ ತಿರುವಿನಲ್ಲೇ ಪಾಡಿ ಸನ್ನಿಧಿಗೆ ಮಹಾದ್ವಾರ ಕೂಡ ದಾನಿ ಹೆಚ್. ವಿಶ್ವಜಿತ್ ಎಂಬವರಿಂದ ರೂ. 24 ಲಕ್ಷದಲ್ಲಿ ಕಲ್ಪಿಸಲಾಗುತ್ತಿದೆ.

ಬೆಳ್ಳಿ ಕವಚ: ಅಂತೆಯೇ ಶ್ರೀ ಗಣಪತಿ ಗುಡಿ ದ್ವಾರಕ್ಕೆ ಅರ್ಚಕ ಕುಶಭಟ್ ಕುಟುಂಬ ರೂ. 2.10 ಲಕ್ಷದಲ್ಲಿ ಬೆಳ್ಳಿ ಕವಚವನ್ನು ಕಟ್ಟೋಳಿಗೆ ಕಲ್ಪಿಸುವದರೊಂದಿಗೆ, ದಾನಿಗಳಿಂದ ಕುಡಿಯುವ ನೀರು, ಆಸನ ವ್ಯವಸ್ಥೆ, ಇನ್ನೂ ಮುಂತಾದ ಅಭಿವೃದ್ಧಿ ಕಲ್ಪಿಸಿದ್ದು, ಈ ಎಲ್ಲಾ ವಿವರಗಳನ್ನು ಸಂಘದ ಕಾರ್ಯದರ್ಶಿ ಬೊಳಂದಂಡ ಲಲಿತಾ ನಂದಕುಮಾರ್ ವಾರ್ಷಿಕ ಲೆಕ್ಕಪತ್ರ ಹಾಗೂ ವರದಿಯೊಂದಿಗೆ ಸಭೆಗೆ ಮಂಡಿಸಿದರು.

ತಂತಿ ಬೇಲಿ: ದೇವಾಲಯ ಜಾಗ ಅತಿಕ್ರಮಣ ತಡೆಗೆ ಈಗಾಗಲೇ ಬೇಲಿ ನಿರ್ಮಾಣದೊಂದಿಗೆ, ಹುತ್ತರಿ ಕದಿರು ತೆಗೆಯುವ ಸಲುವಾಗಿ ಭತ್ತದ ಗದ್ದೆಗೆ ಬೇಲಿ ಸಹಿತ 1.34 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

20 ದಿನಗಳಲ್ಲಿ ಸಭೆ: ದೇವಾಲಯಕ್ಕೆ ಸಂಬಂಧಿಸಿದ ಸಂಪೂರ್ಣ ಜಾಗ 267 ಎಕರೆಯ ಸಂರಕ್ಷಣೆಗಾಗಿ, ಈಗಾಗಲೇ ಅತಿಕ್ರಮಿಸಿರುವ ಕುಟುಂಬಗಳು, ಭಕ್ತಜನ ಸಂಘ ವ್ಯವಸ್ಥಾಪನಾ ಸಮಿತಿ ಜಂಟಿ ಸಭೆ ನಡೆಸಿ ಮುಂದಿನ 20 ದಿನಗಳಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಸಭೆ ನಿರ್ಧರಿಸಿತು.

ಹೋಂಸ್ಟೇ ಬೇಡ : ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ವ್ಯಾಪ್ತಿಯ 5 ಕಿ.ಮೀ. ಪರಿಸರದಲ್ಲಿ ಯಾವದೇ ಹೋಂಸ್ಟೇ, ರೆಸಾರ್ಟ್, ಪ್ರವಾಸಿ ತಾಣಗಳಂತಹ ಯೋಜನೆ ರೂಪಿಸ ದಂತೆ ಜಿಲ್ಲಾಡಳಿತ ಮತ್ತು ಗ್ರಾ.ಪಂ. ನಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಲಾಯಿತು.

ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವು : ಪೊನ್ನಂಪೇಟೆಯ ಶ್ರೀ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ, ಕೊಡಗು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ವೇಳೆ ಸಂತ್ರಸ್ತರಾಗಿರುವ 130 ಮಕ್ಕಳಿಗೆ ಉಚಿತ ಶಿಕ್ಷಣ ನೀಡುವದ್ದನ್ನು ಶ್ಲಾಘಿಸಿ, ಸಂಸ್ಥೆಯ ಮುಖ್ಯಸ್ಥ ಝರು ಗಣಪತಿ ಮುಖಾಂತರ ಮಹಾಸಭೆ ರೂ. 1 ಲಕ್ಷ ತೆರವು ಹಸ್ತಾಂತರಿಸಿ ಮಾನವೀಯತೆ ಮೆರೆಯಿತು.

ಮಹಾಸಭೆಯಲ್ಲಿ ಭಕ್ತ ಜನಸಂಘದ ಪರವಾಗಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಕೇಟೋಳಿರ ಸನ್ನಿ ಸೋಮಣ್ಣ, ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಪ್ರಮುಖರುಗಳಾದ ಕೆ.ಸಿ. ನಾಣಯ್ಯ, ಬೊಳಿಯಾಡಿರ ಸಂತು ಸುಬ್ರಮಣಿ, ಅಂಜಪರವಂಡ ಕುಶಾಲಪ್ಪ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ನಿ.ಮೇ. ಬಾಚಮಂಡ ಕಾರ್ಯಪ್ಪ, ಅಂಜಪರವಂಡ ಚೋಮುಣಿ, ಉದಿಯಂಡ ಮೋಹನ್, ಕುಲ್ಲೇಟಿರ ಅರುಣ್‍ಬೇಬ ಮೊದಲಾದ ವರು ಅಭಿಪ್ರಾಯ ನೀಡಿದರು. ನಿರ್ದೇಶಕರುಗಳಾದ ಕಲಿಯಂಡ ಹ್ಯಾರಿ ಮಂದಣ್ಣ, ಕೋಡಿಮಣಿಯಂಡ ಸುರೇಶ್, ಪಾಂಡಂಡ ನರೇಶ್, ಡಾ. ಸಣ್ಣುವಂಡ ಎಂ. ಕಾವೇರಪ್ಪ, ನಾಟೋಳಂಡ ದಿಲೀಪ್, ಕಲಿಯಂಡ ಸುನಂದ, ಬಡಕಡ ಸುರೇಶ್, ಉದಿಯಂಡ ಸುರಾ ನಾಣಯ್ಯ ಮೊದಲಾದವರು ಉಪಸ್ಥಿತರಿದ್ದು, ಅಭಿಪ್ರಾಯ ಮಂಡಿಸಿದರು. ಉಪಾಧ್ಯಕ್ಷ ಪರದಂಡ ಡಾಲಿ ಸ್ವಾಗತಿಸಿ, ಕೋಡಿಮಣಿಯಂಡ ತಮ್ಮಣಿ ಬೋಪಣ್ಣ ಪ್ರಾರ್ಥಿಸಿ, ಖಜಾಂಚಿ ನಂಬಡಮಂಡ ಸುಬ್ರಮಣಿ ವಂದಿಸಿದರು.