ಮಡಿಕೇರಿ, ನ. 7: ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ಹಿರಿಯ ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ ಹಾಗೂ ರಂಗಭೂಮಿ ಕಲಾವಿದೆ ಅನಿತಾ ಕಾರ್ಯಪ್ಪ ದಂಪತಿಗೆ ‘ದಕ್ಷಿಣ ಕೇಸರಿ’ ಪ್ರಶಸ್ತಿಯನ್ನು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಪ್ರದಾನ ಮಾಡಿದರು.

ಮೈಸೂರು ಗಾಲ್ಫ್ ಕ್ಲಬ್ಬಿನಲ್ಲಿ ಲಯನ್ಸ್ ಸೇವಾ ಸಂಸ್ಥೆ ಮೈಸೂರು ದಕ್ಷಿಣ ಕೇಂದ್ರದ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಂಸದರು ಹಿರಿಯ ಸಾಹಿತಿ ಅಡ್ಡಂಡ ಕಾರ್ಯಪ್ಪ ಹಾಗೂ ಅನಿತಾ ಕಾರ್ಯಪ್ಪ ಅವರು ಅಪ್ಪಚ್ಚಕವಿಯ ತತ್ವಾದರ್ಶಗಳಿಂದ ಪ್ರಭಾವಿತರಾಗಿ ರಂಗಭೂಮಿಯಲ್ಲಿ ಕಷ್ಟದ ಪರಿಸ್ಥಿತಿಯಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಬರಹಗಾರರಾಗಿ, ನಾಟಕಕಾರರಾಗಿ, ಕಲಾವಿದರಾಗಿ, ಕೊಡಗಿನ ಸಂಸ್ಕøತಿಯನ್ನು ದೇಶದ ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ಕೊಡವರ ದೇಶಾಭಿಮಾನವನ್ನು ಎಷ್ಟು ಹೊಗಳಿದರೂ ಸಾಲದು. ಕೊಡಗಿ ನಿಂದ ಇಲ್ಲಿಯವರೆಗೆ ಇಪ್ಪತ್ತಾರು ಉನ್ನತ ಹುದ್ದೆಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಈ ಜನಾಂಗದ್ದು. ದೇಶ ರಕ್ಷಣೆಯೇ ಇವರ ಉಸಿರು. ಕ್ರೀಡೆಯಲ್ಲೂ ಇವರ ಸಾಧನೆ ಅತ್ಯಂತ ಶ್ರೇಷ್ಠವಾದದ್ದು. ಇತಿಹಾಸದ ಪುಟಗಳಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆ ಕಾಲದಲ್ಲಿ 32 ಬಾರಿ ಕೊಡಗಿನ ಮೇಲೆ ಯುದ್ಧ ನಡೆದರೂ ಆತನ ಸೈನ್ಯವನ್ನು ಹಿಮ್ಮೆಟ್ಟಿಸಿ ಸಾಹಸ ಮೆರೆದ ಕೊಡವರು ತಮ್ಮ ಸ್ವಾಭಿಮಾನಕ್ಕೆ ಧÀಕ್ಕೆಯಾದಾಗ ಸಹಿಸಿಕೊಂಡವರಲ್ಲ. ಪ್ರಕೃತಿಯ ದುರಂತದಲ್ಲಿ ಕಂಗೆಟ್ಟಿರುವ ಇವರಿಗೆ ಎಲ್ಲರ ಸಹಕಾರ ಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿದ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕನ್ನಡದ ಉಳಿವಿಗಾಗಿ ಸಂಘಟಿತ ಹೋರಾಟ ಅಗತ್ಯ. ಕನ್ನಡವನ್ನು ಕಾಪಾಡಲು ಸರ್ಕಾರ ಅನೇಕ ಪ್ರಾಧಿಕಾರ, ಅಕಾಡೆಮಿಗಳನ್ನು ರಚಿಸಿದ್ದರೂ ಕನ್ನಡ ಇಂದು ದುಸ್ಥಿತಿಯಲ್ಲಿದೆ. ಇದಕ್ಕೆ ಅಭಿಮಾನ ಶೂನ್ಯವೆ ಕಾರಣ. ರಾಜ್ಯ ಸರ್ಕಾರ ಸಮಾಜಕ್ಕೆ ಬೇಕಿಲ್ಲದ ಜಯಂತಿ ಗಳನ್ನೆಲ್ಲಾ ಮಾಡುತ್ತಿದೆ. ಆದರೆ ಕನ್ನಡ ನಾಡು ನುಡಿ ಏಳಿಗೆಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಕನ್ನಡ-ಕೊಡವ ಆದಿಕವಿ ಅಪ್ಪಚ್ಚಕವಿಯ ಜಯಂತಿಯನ್ನು ಮಾಡುವ ಮನಸ್ಸು ಮಾಡಿಲ್ಲ. ಇದು ದುಃಖದ ಸಂಗತಿ ಎಂದರು.

ಲಯನ್ಸ್ ಸೇವಾ ಸಂಸ್ಥೆಯವರು ನಮ್ಮ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವದು ಖುಷಿ ತಂದಿದೆ. ನನ್ನಂತವರು ಮೈಸೂರಿನಲ್ಲಿ ಸಾಕಷ್ಟು ಜನರಿದ್ದಾರೆ. ಆದರೂ ನನ್ನ ಸೇವೆಯನ್ನು ಗುರುತಿಸಿರುವದು ಕನ್ನಡ ಸೇವೆಗೆ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದರು. ವೇದಿಕೆಯಲ್ಲಿ ಲಯನ್ಸ್ ಸೇವಾ ಸಂಸ್ಥೆ ದಕ್ಷಿಣ ಕೇಂದ್ರ ಅಧ್ಯಕ್ಷ ಕೆ.ಕೆ. ಮೋಹನ್, ಜಿಲ್ಲಾ ಉಪರಾಜ್ಯಪಾಲ ನಾಗರಾಜ್ ವಿ. ಬೈರಿ, ಕಾರ್ಯದರ್ಶಿ ಜೆ. ಸಂತೋಷ್ ಸೇರಿದಂತೆ ಇತರರಿದ್ದರು.