ಶ್ರೀಮಂಗಲ, ನ. 5: ಜಿಲ್ಲಾಡಳಿತ ದಿಂದ ಟಿಪ್ಪು ಜಯಂತಿ ಆಚರಣೆ ಮಾಡುವ ಬಗ್ಗೆ ಜನರನ್ನು ಬೆದರಿಸುವ ನಡೆ ಸರಿಯಲ್ಲ. ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ತಾ. 10 ರಂದು ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ಪೊನ್ನಂಪೇಟೆ ಕೊಡವ ಸಮಾಜದ ನೇತೃತ್ವದಲ್ಲಿ ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರ ಬೆಂಬಲದಿಂದ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಸಮಾಜದ ಅಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ ತಿಳಿಸಿದ್ದಾರೆ.
ಅವರು ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿ ಜಿಲ್ಲಾಡಳಿತ ದಬ್ಬಾಳಿಕೆಯನ್ನು ಹೇರಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಯಿಂದ ಶಾಂತಿ ಸೌಹಾರ್ದತೆಯನ್ನು ಕದಡಲಾಗುತ್ತಿದೆ. ಆದ್ದರಿಂದ ಈ ಆಚರಣೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಟಿಪ್ಪು ಜಯಂತಿ ಸಂದರ್ಭ ಯಾವದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯನ್ನು ಹೊತ್ತುಕೊಳ್ಳಬೇಕೆಂದು ಎಚ್ಚರಿಸಿದೆ.
ಕೊಡಗಿನ ದೇವಟ್ಪರಂಬು ವಿನಲ್ಲಿ ಸಹಸ್ರಾರು ಸಂಖ್ಯೆ ಯಲ್ಲಿ ಕೊಡವರ ಹತ್ಯಾಕಾಂಡ ವಾಯಿತು ಎಂದು ತಿಳಿಸಿದರು. ಈ ನರಮೇಧವನ್ನು ಖಂಡಿಸಿ ಯಾವದೇ ಕಾಲದಲ್ಲಿಯೂ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎನ್ನುವದು ನಮ್ಮ ನಿಲುವಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಪಿ. ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಎಸ್À. ಸುರೇಶ್, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಆರ್. ಶಾರದ, ಮೂಕಳೇರ ಪಿ. ಲಕ್ಷ್ಮಣ, ನಿರ್ದೇಶಕರುಗಳಾದ ಮಲ್ಲೇಮಾಡ ಪ್ರಭು ಪೂಣಚ್ಚ, ಮೂಕಳಮಾಡ ಅರಸು ನಂಜಪ್ಪ, ಅಡ್ಡಂಡ ಸುನೀಲ್ ಸೋಮಯ್ಯ, ಚೆಪ್ಪುಡಿರ ರಾಕೇಶ್ ದೇವಯ್ಯ, ಮಂಡಚಂಡ ದಿನೇಶ್ ಚಿಟ್ಟಿಯಪ್ಪ, ಚೆಪ್ಪುಡಿರ ರೂಪ ಉತ್ತಪ್ಪ, ಚೊಟ್ಟೇಕಾಳಪಂಡ ಆಶಾ ಪ್ರಕಾಶ್, ಹಾಜರಿದ್ದರು.