ಸಿದ್ದಾಪುರ, ನ. 5: ಪ್ರಸಿದ್ಧ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ತುಲಾ ಸಂಕ್ರಮಣದಂದು ತೀರ್ಥೋದ್ಭವ ಆದ ನಂತರ ಕಾವೇರಿ ತೀರದಲ್ಲಿರುವ ಗುಹ್ಯ ಗ್ರಾಮದ ಐತಿಹಾಸಿಕ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪಾವಳಿ ಹಬ್ಬದಂದೇ ಉತ್ಸವ ಆಚರಣೆಗೊಳ್ಳಲು ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆಯಿದೆ.
ಪ್ರತೀ ವರ್ಷ ಕಾರ್ತಿಕ ಮಾಸದ ದೀಪಾವಳಿಯಂದು ದೇವಸ್ಥಾನದಲ್ಲಿ ವಿಜೃಂಬಣೆಯಿಂದ ವಾರ್ಷಿಕ ಉತ್ಸವ ನಡೆಯಲಿದ್ದು ಈ ವರ್ಷವೂ ಉತ್ಸವಾಚರಣೆ ಪ್ರಾರಂಭಗೊಂಡಿದೆ.
ತಾ. 3 ರಂದು ಶ್ರೀ ಅಗಸ್ತ್ಯೇಶ್ವರ ದೇವ ಸನ್ನಿಧಿಯಲ್ಲಿ ಧ್ವಜಾರೋಹಣ ಮಾಡಿ ಗಣಪತಿ ಹೋಮದೊಂದಿಗೆ ದೇವರಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಅರ್ಪಿಸುವದರ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಪುಣ್ಯಾಹವಾಚನ, ಮಹಾವಿಷ್ಣು ದೇವಸ್ಥಾನದಲ್ಲಿ ಪ್ರಾರ್ಥನೆ, ಸತ್ಯನಾರಾಯಣ ಪೂಜೆ, ಕೊಡಿಮರ ನಿಲ್ಲಿಸುವದು, ಸುತ್ತುಬಲಿ, ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆ ನಡೆಯಿತು.
ತಾ. 6 ರಂದು (ಇಂದು) ರಾತ್ರಿ ನೆರಪು ಉತ್ಸವ, ವಸಂತ ಪೂಜೆ, ರಂಗ ಪೂಜೆ, ಮುಂತಾದವುಗಳು ನಡೆಯಲಿದೆ. ತಾ. 7 ರಂದು ಬೆಳಿಗ್ಗೆ 5.30 ರಿಂದ ಪಿತೃ ತರ್ಪಣ, ಪಿಂಡಬಲಿ, ಮಹಾಪೂಜೆಯೊಂದಿಗೆ ನೃತ್ಯ ಬಲಿ, ಜಳಕ, ಮಹಾಪೂಜೆ, ಶ್ರೀ ಚಾಮುಂಡೇಶ್ವರಿ ದೇವಿಗೆ ತಂಬಿಲ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ತೀರ್ಥ ಸ್ವರೂಪಿಣಿಯಾಗಿ ಬ್ರಹ್ಮಗಿರಿ ಮಡಿಲಿನ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಹರಿಯಲು ಪ್ರಾರಂಭಿಸಿದ ಕಾವೇರಿಯನ್ನು ಅಗಸ್ತ್ಯ ಮುನಿಯು ಈ ಪ್ರದೇಶದಲ್ಲಿ ತಡೆಯಲು ಯತ್ನಿಸಿದ, ಈ ಸಂದರ್ಭ ಇಲ್ಲಿ ಬೃಹತ್ ಗಾತ್ರದ ಶಿವ ಲಿಂಗವನ್ನು ಪ್ರತಿಷ್ಠಾಪಿಸಿದ ಎಂಬದು ಪುರಾಣಗಳಲ್ಲಿ ಉಲ್ಲೇಖವಿದೆ. ಉತ್ಸವದ ಅಂಗವಾಗಿ ಇಲ್ಲಿನ ಪೂಜಾ ಕೈಂಕರ್ಯಗಳು ಹುಲಿತಾಳ ಉದಯಕುಮಾರ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.