ಮಡಿಕೇರಿ, ನ. 4: ಕೊಡಗು ಜಿಲ್ಲೆಯಲ್ಲಿ ನ. 10 ರಂದು ಟಿಪ್ಪು ಜಯಂತಿ ಆಚರಿಸುವದ್ದನ್ನು ಜಿಲ್ಲೆಯ ಸಮಸ್ತ ಗೌಡ ಜನಾಂಗ ವಿರೋಧಿಸುವದಾಗಿ, ಕೊಡಗು ಗೌಡ ಸಮಾಜಗಳ ಒಕ್ಕೂಟ ಪ್ರತಿಕ್ರಿಯೆ ನೀಡಿದೆ. ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ, ಟಿಪ್ಪು ಜಯಂತಿಯಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ನ. 10 ರಂದು ಪ್ರತಿ ವರ್ಷ ಟಿಪ್ಪು ಜಯಂತಿಯನ್ನು ಆಚರಿಸುವ ಬಗ್ಗೆ ಹಿಂದಿನ ಕರ್ನಾಟಕ ಸರಕಾರದ ಆದೇಶ; ಒಂದು ವಿವಾದಿತ ಆದೇಶವೆಂದು ಭಾವಿಸುತ್ತೇವೆ. 2015ರ ನ. 10 ರಂದು ಟಿಪ್ಪು ಸುಲ್ತಾನ (ಮೊದಲ ಪುಟದಿಂದ) ಜಯಂತಿಯನ್ನು ಕರ್ನಾಟಕದಲ್ಲಿ ಆಚರಿಸಲು ಹೊರಟ ಸರಕಾರ ಜಿಲ್ಲೆಯಲ್ಲಿ ಕೆಲವು ಹಿಂಸಾತ್ಮಕ ಘಟನೆಯಿಂದಾಗಿ ಜಿಲ್ಲೆಯ ಜನರಿಗೆ ಮಾನಸಿಕವಾಗಿ ಘಾಸಿ ಉಂಟು ಮಾಡಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿಯಲು ಕಾರಣವಾಗಿರುವದನ್ನು ನೋವುಂಡ ಜಿಲ್ಲೆಯ ಎಲ್ಲಾ ಮತಿಯ ಜನರು ಮರೆಯಲು ಇನ್ನೂ ಹಲವಷ್ಟು ವರ್ಷಗಳು ಬೇಕಾಗಬಹುದು ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ 2018ರ ಸಾಲಿನಲ್ಲಿ ಕೊಡಗು ಜಿಲ್ಲೆ ಶತ ಶತಮಾನಗಳಿಂದ ಕಂಡು ಕೇಳರಿಯದ ಜಲಪ್ರಳಯ, ಭೂಕುಸಿತ ಹಾಗೂ ಜೀವ ಹಾನಿಯಿಂದ ಜರ್ಜರಿತವಾಗಿದೆ. ಜೀವ, ಆಸ್ತಿ ಹಾಗೂ ಮನೆ ಕಳೆದುಕೊಂಡ ಜನತೆಯ ಮರು ಜೀವನಕ್ಕೆ ಶೀಘ್ರವಾಗಿ ಸರಕಾರ ಗಮನವನ್ನು ಕೇಂದ್ರೀಕರಿಸಬೇಕೆಂದು ಕೋರುತ್ತೇವೆ. ಹಾಗೆಯೇ ನ. 10 ರಂದು ಆಚರಿಸಲು ಉದ್ದೇಶಿಸಲಾಗಿರುವ ಟಿಪ್ಪು ಜಯಂತಿಯನ್ನು ಕೊಡಗು ಜಿಲ್ಲೆಯಲ್ಲಿ ಆಚರಿಸುವದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸುತ್ತೇವೆ. ಜಿಲ್ಲೆಯ ಜನತೆಯ ಸಾಮರಸ್ಯ ಜೀವನ ಸಲುವಾಗಿ ಉದ್ದೇಶಿತ ಟಿಪ್ಪು ಜಯಂತಿಯನ್ನು ಜಿಲ್ಲೆಯ ಸಮಸ್ತ ಗೌಡ ಜನಾಂಗ ವಿರೋಧಿಸುತ್ತದೆ ಎಂದು ಸೋಮಣ್ಣ ತಿಳಿಸಿದ್ದಾರೆ.