ವೀರಾಜಪೇಟೆ, ನ. 5: ಕಾಕೋಟುಪರಂಬುವಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ರೇಣುಕಾ ಅವರನ್ನು ಅಮಾನತುಗೊಳಿಸುವಂತೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮೇಲ್ವಿಚಾರಕಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ಖಾತರಿಯಾಗಿರುವ ಮೇರೆಗೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯದಿಂದ ಹೊರಬಂದು ಕೆರೆಯಲ್ಲಿ ಮೀನು ಹಿಡಿಯುತ್ತಿದ್ದನ್ನು ಕಂಡ ಗ್ರಾಮಸ್ಥರು; ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಕರೆತಂದು ಅಡುಗೆ ಸಹಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಜಿಲ್ಲಾ ಪಂಚಾಯತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ, ಬಿಸಿಎಂ ತಾಲೂಕು ಅಧಿಕಾರಿ ಪ್ರೀತಿ ಚಿಕ್ಕಮಾದಯ್ಯ ಎದುರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಿಚ್ಚಿಟ್ಟರು. ಬಿಸಿಎಂ ಇಲಾಖೆಯ ಅಧಿಕಾರಿ ದೂರವಾಣಿ ಕರೆ ಮಾಡಿದ ನಂತರ ರಾತ್ರಿ 8 ಗಂಟೆಗೆ ವಾರ್ಡನ್ ಹಾಸ್ಟೆಲ್‍ಗೆ ಹಾಜರಾದರು.
ಗ್ರಾಮ ಪಂಚಾಯಿತಿ ಸದಸ್ಯ ಮಂಡೇಟಿರÀ ಅನಿಲ್ ಮಾತನಾಡಿ, ವಸತಿ ನಿಲಯದ ವಿದ್ಯಾರ್ಥಿಗಳು ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಕಾಕೋಟುಪರಂಬು ಕಾಲಭೈರವ ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದರು. ಕೆರೆ 15 ಅಡಿಗೂ ಅಧಿಕ ಆಳವಿದೆ. ಇದನ್ನು ಕಂಡು ಗ್ರಾಮಸ್ಥರಾದ ಮೋಹನ್, ಸುನೇಶ್, ದಿನೇಶ್ ಮತ್ತಿತರರು ಸೇರಿ 9 ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಕರೆ ತಂದರು. ವಾರ್ಡನ್ ಎಲ್ಲಿ ಎಂದು ಕೇಳಿದಾಗ ಈಗ ಮನೆಗೆ ತೆರಳಿದರು ಎಂದು ಅಡುಗೆ ಸಹಾಯಕಿ ಶಾರದಮ್ಮ ಹೇಳಿದರಲ್ಲದೆ, ವಾರ್ಡನ್ ಗೈರು ಹಾಜರಾತಿಗೆ ನಾವೇನು ಜವಾಬ್ದಾರರಲ್ಲ. ಅವರು ಎಲ್ಲೆಲ್ಲಿ ಹೋಗುತ್ತಾರೆ ಎಂಬದು ನಮಗೇನು ಗೊತ್ತಾಗುತ್ತೆ. ನಮ್ಮ ವಿರುದ್ಧವೇ ಉಡಾಫೆಯ ಉತ್ತರ ನೀಡುತ್ತಾರೆ. ಅದಕ್ಕಾಗಿಯೆ ಗ್ರಾಮಸ್ಥರು ಸೇರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ದೂರವಾಣಿ ಕರೆ ಮಾಡಿ ಹಾಸ್ಟೆಲ್ ಪರಿಶೀಲನೆ ನಡೆಸುವಂತೆ ತಿಳಿಸಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಬಂದು ಹಾಸ್ಟೆಲ್ ಪರೀಶೀಲನೆ ನಡೆಸಿದಾಗ; ವಾರ್ಡನ್ ಹಾಜರಿ ಪುಸ್ತಕದಲ್ಲಿ ಮಾತ್ರ ಸಹಿ ಮಾಡಿ ಗೈರು ಹಾಜರಾಗುತ್ತಿರುವದು ತಿಳಿದು ಬಂತು. ವಾರ್ಡನ್ ಕೆ.ಬಿ. ರೇಣುಕಾ ಅವರಿಗೆ ವೀರಾಜಪೇಟೆ ಬಿಸಿಎಂ ಹಾಸ್ಟ್ಟೆಲ್ ಜವಾಬ್ದಾರಿಯೂ ಇದೆ. ಕಳೆದರೆಡು ದಿನಗಳ ಹಿಂದೆ ಅಲ್ಲಿಗೂ ಭೇಟಿ ನೀಡಿದಾಗ ಇದೇ ಪರಿಸ್ಥಿತಿ ಎದುರಾಗಿದೆ. ಅವರನ್ನು ಅಮಾನತು ಮಾಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದೇನೆ ಎಂದು ಬೋಪಣ್ಣ ಹೇಳಿದರು.
ದೂರವಾಣಿ ಕರೆಗಳ ಮೂಲಕ ರಾತ್ರಿ 8 ಗಂಟೆಗೆ ಆಗಮಿಸಿದ ವಾರ್ಡನ್ ರೇಣುಕಾ ಅವರನ್ನು ಅಧಿಕಾರಿ ಪ್ರೀತಿ ವಿಚಾರಣೆ ನಡೆಸಿದಾಗ; ‘ನಾನೇನು ತಪ್ಪು ಮಾಡಿಲ್ಲ. ಅಡುಗೆ ಸಹಾಯಕರಿಗೆ ಎಲ್ಲಾ ಹೇಳಿ ಹೋಗಿದ್ದೇನೆ. ಮಕ್ಕಳು ಹೊರಗಡೆ ಹೋಗಿರುವದಕ್ಕೆ ನಾನೇನು ಮಾಡಲು ಸಾಧ್ಯ. ನೀವು ಬೇಕಾದರೆ ನನ್ನನ್ನು ಸಸ್ಪೆಂಡ್ ಮಾಡಿ ನಾನೇನು ಹೆದರೋದಿಲ್ಲ’ ಎಂದು ಉಡಾಫೆಯ ಉತ್ತರ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೆ ಅಮಾನತು ಮಾಡುವಂತೆ ಅಧಿಕಾರಿಯನ್ನು ಆಗ್ರಹಿಸಿದರು.
ವಿದ್ಯಾರ್ಥಿಗಳು ಕೂಡ ತಮಗೆ ಅಡುಗೆಯವರು ಬೆಳಿಗ್ಗೆ ಕಾಫಿ ಹಾಗೂ ತಿಂಡಿ ಹೊಟ್ಟೆ ತುಂಬಾ ನೀಡುವದಿಲ್ಲ. ಜಾಸ್ತಿ ಕೇಳಿದರೆ ಮಕ್ಕಳಿಗೆಲ್ಲ ಇಷ್ಟು ಸಾಕು ಅಂತಾರೆ. ಎಲೆ ಅಡಿಕೆ, ತಂಬಾಕು ಪದಾರ್ಥಗಳನ್ನು ತರಲು ಅಂಗಡಿಗೆ ಕಳುಹಿಸುತ್ತಾರೆ. ಅಂಗಡಿಗೆ ಹೋಗುವದಿಲ್ಲ ಎಂದು ಹೇಳಿದರೆ ಶಾಲೆಯಲ್ಲಿ ಶಿಕ್ಷಕರಿಗೆ ಹೇಳಿ ಹೊಡೆಸುತ್ತೀನಿ ಅಂತ ಹೆದರಿಸುತ್ತಾರೆ ಎಂದು ಅಧಿಕಾರಿ ಹಾಗೂ ಜನ ಪ್ರತಿನಿಧಿಗಳ ಮುಂದೆ ಹೇಳಿದರು.
ಆದರೆ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ತಿರುಗಾಡುತ್ತಿರುವದ ರಿಂದ ಸರ್ಕಾರದ ಕಾನೂನು ಕಟ್ಟಳೆ ನಿಯಮಗಳು ಯಾವದು ಅನ್ವಹಿಸುತ್ತಿಲ್ಲ. ವಾರ್ಡನ್ ವಾರಕ್ಕೆ ಒಂದೆರಡು ಬಾರಿ ಬರುತ್ತಾರೆ, ಹೋಗುತ್ತಾರೆ. ಅವರಿಗೆ ಹಾಸ್ಟೆಲ್ ಬಗ್ಗೆ ಯಾವದೇ ಕಾಳಜಿ ಇಲ್ಲ. ಆದರೆ ಹಾಜರಿ ಪುಸ್ತಕದಲ್ಲಿ ಮಾತ್ರ ದಿನ ಬಂದ ಹಾಗೆ ಸಹಿ ಮಾಡುತ್ತಾರೆ. ಅವರಿಗೆ ಇಲ್ಲಿರುವ ಅಡುಗೆ ಸಹಾಯಕರು ಸಾಥ್ ನೀಡುತ್ತಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಮಂಡೇಟಿರ ಅನಿಲ್ ದೂರಿದರು.
ತಾಲೂಕು ಅಧಿಕಾರಿ ಪ್ರೀತಿ ಮಾತನಾಡಿ, ತಾನು ತಾಲೂಕಿಗೆ ಬಂದು ಕೇವಲ ಮೂರು ದಿನಗಳಾಗಿದೆ. ನಮ್ಮ ಇಲಾಖೆÉಗೆ 7 ಹಾಸ್ಟೆಲ್‍ಗಳು ಬರುತ್ತಿದೆ. ಈಗಾಗಲೇ ಪಾಲಿಬೆಟ್ಟ ಹಾಸ್ಟೆಲ್ ಪರಿಶೀಲನೆ ನಡೆಸಿದ್ದೇನೆ. ಕಾಕೋಟುಪರಂಬು ಹಾಸ್ಟೆಲ್ ವಿಚಾರ ಈಗ ತಿಳಿದಿದೆ. ವಿಚಾರಣೆ ನಡೆಸಿ ಮೇಲಾಧಿಕಾರಿ ಗಳಿಗೆ ದೂರು ನೀಡುತ್ತೇನೆ ಎಂದರು.
ಕಾಕೋಟುಪರಂಬು ಪ್ರೌಢಶಾಲಾ ಮುಖ್ಯ ಶಿಕ್ಷಕ ಹೊನ್ನೂರಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಂಡಚ್ಚಿರ ಚಿಂಗಪ್ಪ, ಗ್ರಾಮಸ್ಥರಾದ ಮೂಳೆರ ಪ್ರತಾಪ್, ಚಂಬಂಡ ಅಪ್ಪಚ್ಚು ಮತ್ತಿತರರು ಉಪಸ್ಥಿತರಿದ್ದರು.