ಗೋಣಿಕೊಪ್ಪ ವರದಿ, ನ. 5 : ಅಸಾಂವಿಧಾನಿಕ ಟಿಪ್ಪು ಜಯಂತಿ ಆಚರಣೆ ಸಿಂಧುವಲ್ಲ ಎಂದು ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಸುಧಾಕರ್ ಹೊಸಳ್ಳಿ ಅಭಿಪ್ರಾಯಪಟ್ಟರು.
ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪ್ರಜ್ಞಾ ಕಾವೇರಿ ಸಂಘಟನೆ ವತಿಯಿಂದ ಆಯೋಜಿಸಿದ್ದ ಟಿಪ್ಪು ಕರಾಳ ಮುಖಗಳ ಅನಾವರಣ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು. ಹಿಂದೂಗಳ ಧಾರ್ಮಿಕ ಹಕ್ಕಿನ ವಿರುದ್ಧ ಆಚರಣೆ ನಡೆಯುತ್ತಿದೆ. ಸಂವಿಧಾನದ 15/1 ಉಪವಿಧಿ ಪ್ರಕಾರ ಇಂತಹ ಆಚರಣೆ ಇಲ್ಲ ಎಂದು ನಮೂದಿಸಲಾಗಿದ್ದರೂ ಹಿಂದೂಗಳ ಧಾರ್ಮಿಕ ಹಕ್ಕು ಉಲ್ಲಂಘನೆ ಮೂಲಕ ಆಚರಿಸಲಾಗುತ್ತಿದೆ. ಇಂತಹ ಆಚರಣೆಯನ್ನು ತಡೆಯುವ ಅಧಿಕಾರ ವ್ಯಾಪ್ತಿ ಸುಪ್ರಿಂ ಕೋರ್ಟ್‍ಗೆ ಇದೆ. ಸಾಮರಸ್ಯ ಕಾಪಾಡುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಆಚರಣೆಯಲ್ಲಿನ ತಾಂತ್ರಿಕ ದೋಷವನ್ನು ಅರಿತುಕೊಂಡು ಬಹು ಸಂಖ್ಯಾತರಿಗೆ ರಕ್ಷಣೆ ಕೊಡುವಂತಾಗಲಿ ಎಂದರು.
ಲೇಖಕ ಮಾಣಿಪಂಡ ಸಂತೋಷ್ ತಮ್ಮಯ್ಯ ಮಾತನಾಡಿ, ಟಿಪ್ಪುವನ್ನು ಕೊಡಗಿನಲ್ಲಿ ಹಿಮ್ಮೆಟ್ಟಿಸಿದ ಪ್ರದೇಶ ಎಂದು ಪ್ರಸಿದ್ಧ ಪಡೆದಿರುವ ವೀರಾಜಪೇಟೆ ಭಾಗದಲ್ಲಿ ಹೆಚ್ಚು ಜನಜಾಗೃತಿ ನಡೆಯಬೇಕಿದೆ ಎಂದರು.
ಹರದಾಸ ಅಪ್ಪಚ್ಚಕವಿ ಅವರ 150ನೇ ಜನ್ಮದಿನಾಚರಣೆ ನಡೆಯುತ್ತಿದ್ದರೂ ಸರ್ಕಾರ ಕವಿಯ ನೆನಪು ಮಾಡಲು ಮುಂದಾಗುತ್ತಿಲ್ಲ. ಇದರಿಂದಾಗಿ ಸ್ವಾಭಿಮಾನದಿಂದ ಟಿಪ್ಪು ಜಯಂತಿಯನ್ನು ವಿರೋಧಿಸಬೇಕಿದೆ ಎಂದರು.
ಸಾಮಾಜಿಕ ಹೋರಾಟಗಾರ ರಾಬರ್ಟ್ ರೊಜಾóರಿಯೋ ಮಾತನಾಡಿ, ಟಿಪ್ಪುವಿನ ಕರಾಳ ಮುಖಗಳ ಬಗ್ಗೆ ಜಾಗೃತಿಯಾಗ ಬೇಕಿದೆ. ಜನಜಾಗೃತಿ ಮೂಲಕ ರಾಜಕೀಯವಾಗಿ ಒತ್ತಡ ತರಬೇಕಾದ ಅನಿವಾರ್ಯತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಕೊಡಗಿನ ಮೂಲನಿವಾಸಿ ಗಳನ್ನು ನಾಶ ಮಾಡುವ ಉದ್ದೇಶದಿಂದ ಟಿಪ್ಪು ಜಯಂತಿ ಆಚರಣೆಯಾಗುತ್ತಿದೆ. ಕೊಡಗಿನ ಬಗ್ಗೆ ಏನು ತಿಳಿಯದ ಕೋ. ಚೆನ್ನಬಸಪ್ಪ ಯಾವದೋ ಲೈಬ್ರರಿಯಲ್ಲಿ ಸಿಗುವ ಪುಸ್ತಕ ನೋಡಿ ಕೊಡಗಿನ ಇತಿಹಾಸದ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿ ಬಂದು ಖುದ್ದು ನೋಡಿ ಇತಿಹಾಸ ಮಾತಾಡಲಿ ಎಂದರು.
ಇತಿಹಾಸಕಾರ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಮೊದಲ ಬಾರಿಗೆ ಕೊಡಗಿನ ಸಾಹಿತಿ ಡಾ. ಐ. ಮಾ. ಮುತ್ತಣ್ಣ ಟಿಪ್ಪುವಿನ ಕರಾಳಮುಖವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಜಾಗೃತಿ ಮೂಡಿಸಿದ್ದರು. ಇದರಿಂದ ಅಸಲಿಮುಖ ಅನಾವರಣ ಗೊಂಡಿತು. ಕಾವೇರಿ ನಾಡಿನಲ್ಲಿ ಆಚರಣೆ ಬೇಡ. ಸಚಿವೆ ಜಯಮಾಲಗೆ ಟಿಪ್ಪು ಬಗ್ಗೆ ಗೊತ್ತಿಲ್ಲ. ಚಿಕ್ಕರಂಗೇಗೌಡ ಅವರು, ಕೊಡಗಿನಲ್ಲಿ ಅರೆಭಾಷಿಕರನ್ನು ಮತ್ತು ಕೊಡವರನ್ನು ಒಡೆಯುವ ಹುನ್ನಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಶಾಸಕ ಕೆ.ಜಿ. ಬೋಪಯ್ಯ, ಆರ್‍ಎಸ್‍ಎಸ್ ಜಿಲ್ಲಾ ಸಂಘ ಚಾಲಕ ಚೆಕ್ಕೇರ ಮನು ಮೊದಲಾದವರು ಪಾಲ್ಗೊಂಡಿದ್ದರು. ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ಐನಂಡ ಜಪ್ಪು ಸ್ವಾಗತಿಸಿದರು. ವರದಿ - ಸುದ್ದಿಪುತ್ರ.