ಉಪವಿಭಾಗಾಧಿಕಾರಿ ಭರವಸೆ
ಸಿದ್ಧಾಪುರ, ನ. 5: ಗುಹ್ಯ ಗ್ರಾಮದ ಕಕ್ಕಟ್ಟುಕಾಡು ರಸ್ತೆ ವಿಚಾರದಲ್ಲಿ ಉಪವಿಭಾಗಾಧಿಕಾರಿ ಜವರೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾನೂನು ರೀತಿಯಲ್ಲಿ ರಸ್ತೆ ತೆರವುಗೊಳಿಸುವದಾಗಿ ತಿಳಿಸಿದರು.
ಡಿ.ವೈ.ಎಸ್.ಪಿ ಸುಂದರ್ ರಾಜ್ ಅವರೊಂದಿಗೆ ಗುಹ್ಯ ಗ್ರಾಮಕ್ಕೆ ತೆರಳಿದ ಉಪ ವಿಭಾಗಾಧಿಕಾರಿಗಳು ಸುಮಾರು 1 ಕಿ.ಮೀ. ಕಾಲ್ನಡಿಗೆಯಲ್ಲೇ ಕಕ್ಕಟ್ಟುಕಾಡುವಿಗೆ ತೆರಳಿ ರಸ್ತೆಯನ್ನು ಪರಿಶೀಲಿಸಿದರು. ಈ ಸಂದರ್ಭ ಆಳಲನ್ನು ತೋಡಿಕೊಂಡ ಗ್ರಾಮಸ್ಥರು, ಹಲವಾರು ವರ್ಷಗಳಿಂದ ರಸ್ತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಗ್ರಾಮದಲ್ಲಿ 35 ಕುಟುಂಬ ವಾಸವಾಗಿದ್ದು, ನಿತ್ಯ ನಡೆದುಕೊಂಡೆ ಹೋಗಬೇಕಿದೆ ಎಂದರು. ಗ್ರಾ.ಪಂ ಸದಸ್ಯ ರೆಜಿತ್ ಕುಮಾರ್ ಕೂಡ ಗ್ರಾಮದ ಸಮಸ್ಯೆಯ ಬಗ್ಗೆ ಉಪ ವಿಭಾಗ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಈ ಸಂದರ್ಭ ಕಂದಾಯ ಪರಿವೀಕ್ಷಕರಾದ ವಿನು ಅವರಿಗೆ ರಸ್ತೆಯ ಸರ್ವೆ ಮಾಡಲು ಆದೇಶ ನೀಡಿದರು. ಗ್ರಾಮಸ್ಥರೊಂದಿಗೆ ಮಾತನಾಡಿದ ಜವರೇಗೌಡ ಅವರು, ಕಾನೂನು ರೀತಿಯಲ್ಲಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದರು.
ಇದೇ ಸಂದರ್ಭ ಗ್ರಾಮಸ್ಥರು ಅಹೋರಾತ್ರಿ ಹೋರಾಟದ ಬಗ್ಗೆ ತಿಳಿಸಿದ್ದು, ತಾನು ಈಗಷ್ಟೇ ಭೇಟಿ ನೀಡಿದ್ದು, ಒಂದಷ್ಟು ಕಾಲಾವಕಾಶ ನೀಡಿ ಎಂದು ಕೋರಿದರು.
ಈ ಸಂದರ್ಭ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ದಯಾನಂದ್, ಗ್ರಾಮ ಲೆಕ್ಕಿಗ ಮಂಜುನಾಥ್, ಅನಿಲ್, ಗ್ರಾಮಸ್ಥರಾದ ಪಿ.ಕೆ ಚಂದ್ರನ್, ವಿಜಯನ್, ಮಣಿ, ಕೆ.ಜಿ ಚಂದ್ರ, ರಾಜೇಶ್ ಸೇರಿದಂತೆ ಇನ್ನಿತರರು ಇದ್ದರು.