ಮಡಿಕೇರಿ, ಅ. 24: ಶ್ರೀ ರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ, 1990ರ ಅ. 30 ಹಾಗೂ ನ. 2 ರಂದು ಅಯೋಧ್ಯೆಯಲ್ಲಿ ಕರಸೇವಕರ ಬಲಿದಾನವಾಗಿರುವ ಸಂಸ್ಮರಣೆ ಯೊಂದಿಗೆ ನ. 2 ರಂದು ದೇಶವ್ಯಾಪಿ ರಾಷ್ಟ್ರೀಯ ಬಲಿದಾನ ದಿನವನ್ನಾಗಿ ಆಚರಿಸಲಾಗುವದು ಎಂದು ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯ ನಾರಾಯಣ ತಿಳಿಸಿದ್ದಾರೆ.
ನಿನ್ನೆ ತಲಕಾವೇರಿಯಿಂದ ಭಾಗಮಂಡಲ ತನಕ ನೂರಾರು ಕಾರ್ಯಕರ್ತರೊಂದಿಗೆ ಕ್ಷೇತ್ರದ ಸ್ವಚ್ಛತೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸಪ್ತ ನದಿಗಳಾದ ಗಂಗೆ, ಯಮುನ, ಸರಸ್ವತಿ, ನರ್ಮದೆ, ಸಿಂಧು ಹಾಗೂ ಕಾವೇರಿ ಸದಾ ಪ್ರಾತಃ ಸ್ಮರಣೆಯೊಂದಿಗೆ ನಿತ್ಯ ಪ್ರತಿಯೊಬ್ಬರು ಸ್ಮರಿಸುವದಾಗಿದೆ ಎಂದು ನೆನಪಿಸಿದರು. ಇಂತಹ ಕ್ಷೇತ್ರದ ಸ್ವಚ್ಛತೆಯಲ್ಲಿ ಪಾಲ್ಗೊಂಡ ಯುವಕರು, ನ. 2 ರಂದು ಬಲಿದಾನಗಳ ಸಂಸ್ಮರಣೆಯಲ್ಲಿಯೂ ಪಾಲ್ಗೊಂಡು ಇನ್ನಷ್ಟು ಸಕ್ರಿಯವಾಗಿ ಸಂಘಟನೆ ಬಲಪಡಿಸಲು ಕೈಜೋಡಿಸುವಂತೆ ಕರೆ ನೀಡಿದರು.
ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ತೀರ್ಥ ಕ್ಷೇತ್ರಗಳ ರಕ್ಷಣೆಯಲ್ಲಿ ಕೊಡಗಿನ ಯುವಕರು ಸಕ್ರಿಯ ಪಾಲ್ಗೊಂಡು, ಪಾವಿತ್ರ್ಯ ಕಾಪಾಡುವಲ್ಲಿ ಸಹಕಾರ ನೀಡುವಂತೆ ಸಲಹೆ ನೀಡಿದರಲ್ಲದೆ, ಆಗಿಂದಾಗ್ಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಂಡರೆ ವ್ಯವಸ್ಥಾಪನಾ ಸಮಿತಿಯೂ ಕೈಜೋಡಿಸುವದಾಗಿ ಭರವಸೆ ನೀಡಿದರು.
ಇಂತಹ ಕ್ಷೇತ್ರಗಳ ಪಾವಿತ್ರ್ಯ ಕಾಪಾಡುವಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡು ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಕೆ ಹೆಚ್ ಚೇತನ್ ವಿ. ಹಿಂ. ಪ ಪ್ರಮುಖರಾದ ಡಿ. ನರಸಿಂಹ, ಗಣೇಶ್ ಮೇದಪ್ಪ, ಪುದಿಯೊಕ್ಕಡ ರಮೇಶ್, ಸುರೇಶ್ ಮುತ್ತಪ್ಪ, ಚೆಟ್ಟಳ್ಳಿ ಬಾಬಣ್ಣ ಬಜರಂಗದಳದ ಪ್ರಮುಖರಾದ ವಿನಯ್‍ಕುಮಾರ್, ನಾಗೇಶ್, ಚಾಮೇರ ಪ್ರದೀಪ್, ರಾಜೀವ್, ಪ್ರದೀಪ್ ಮುಂತಾದ ನೂರಾರು ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.