ಮಡಿಕೇರಿ, ಅ. 24: ಬೇಟೆಯಾಡುವ ಗುಂಗಿನಲ್ಲಿ ಕೋವಿಯೊಂದಿಗೆ ಕಾಫಿ ತೋಟದ ನಡುವೆ ಕಾಡಂಚಿನಲ್ಲಿ ಪ್ರಾಣಿಯೊಂದಕ್ಕೆ ಗುಂಡು ಹಾರಿಸಿರುವ ಪರಿಣಾಮ, ದಕ್ಷಿಣ ಕೊಡಗಿನ ವೆಸ್ಟ್‍ನೆಮ್ಮಲೆ ನಿವಾಸಿ, ಕೆ.ಎನ್. ದಿನೇಶ್ ಮಕ್ಕಂದೂರು ಬಳಿ ಹೆಮ್ಮೆತ್ತಾಳುವಿನಲ್ಲಿ ತಾ. 21 ರಂದು ತನ್ನ ಪತ್ನಿಯ ಸಂಬಂಧಿಯನ್ನು ಬಲಿ ಪಡೆದಿರುವದು ಬಹಿರಂಗಗೊಂಡಿದೆ. ವಿಶ್ವಾಸನೀಯ ಮೂಲಗಳ ಪ್ರಕಾರ ಭಾನುವಾರ ಸಂಜೆ ಮಾವನ ಮನೆಯಿಂದ ತನ್ನ ಬಾವಮೈದುನ ಸದಾ ಮುತ್ತಪ್ಪನ ಕೋವಿಯೊಂದಿಗೆ ದಿನೇಶ್ ಬೇಟೆಗೆ ತೆರಳಿದ್ದಾನೆ ಎಂದು ಗೊತ್ತಾಗಿದೆ.ಈ ವೇಳೆ ಆತನಿಗೆ ಕಾಡು ಹಂದಿಯೊಂದು ಎದುರಾಗಿದ್ದು, ಅತ್ತ ಗುಂಡು ಹಾರಿಸಿದ್ದಾನೆ. ಆದರೆ ಹಂದಿ ಗುಂಡೇಟಿನಿಂದ ತಪ್ಪಿಸಿಕೊಂಡಿರು ವದಾಗಿ ಗೊತ್ತಾಗಿದೆ. ಗುಂಡಿನ ಶಬ್ದ ಕೇಳಿಸಿಕೊಂಡಿರುವ ಹೆಮ್ಮೆತ್ತಾಳುವಿನ ನಿವಾಸಿ ರಂಜಿತ್ ಮಾಚಯ್ಯ, ತನ್ನ ಮನೆಯಿಂದ ಕೋವಿಯೊಂದಿಗೆ ಗುಂಡಿನ ಶಬ್ದ ಕೇಳಿ ಬಂದ ದಿಕ್ಕಿನಲ್ಲಿ ತೆರಳಿದ್ದಾನೆ. ಅಷ್ಟರಲ್ಲಿ ಆತನ ತಾಯಿ ಬೇಟೆಗೆ ತೆರಳದಂತೆ ಪದೇ ಪದೇ ಕರೆದು ಕೇಳಿಕೊಂಡಿದ್ದಾಗಿಯೂ ತಿಳಿದು ಬಂದಿದೆ. ತಾಯಿ ಮಾತನ್ನು ಲೆಕ್ಕಿಸದೆ ತೆರಳಿರುವ ರಂಜಿತ್ ಕಡಿದಾದ ಪ್ರದೇಶದಲ್ಲಿ ಕಾಫಿ ಗಿಡಗಳ ನಡುವೆ ಕೆಳಗಿನಿಂದ ಮೇಲೇರಿ ಹೊರಟಿದ್ದಾನೆ.ಅಲ್ಲದೆ, ಈತ ಕಪ್ಪು ಬಣ್ಣದ ಜರ್ಕಿನ್ ಕೂಡ ಧರಿಸಿಕೊಂಡಿದ್ದು, ಅನತಿ ದೂರದಲ್ಲೇ ಪ್ರಾಣಿಗಾಗಿ ಹೊಂಚು ಹಾಕಿ ಕುಳಿತ್ತಿದ್ದ ದಿನೇಶ್, ಗಿಡಗಳು ಅಲ್ಲಾಡುವದರೊಂದಿಗೆ ಕಪ್ಪು ಜರ್ಕಿನ್ ಕಣ್ಣಿಗೆ ಬೀಳುತ್ತಲೇ, ಹಂದಿಯೆಂದೇ ಭಾವಿಸಿ ಎರಡನೆಯ ಗುಂಡು ಹಾರಿಸಿರುವನೆನ್ನಲಾಗಿದೆ. ಆದರೆ ಗುಂಡೇಟಿನಿಂದ ಬೊಬ್ಬಿಡುತ್ತಾ ನೆಲಕ್ಕುರುಳಿರುವದು ರಂಜಿತ್ ಮಾಚಯ್ಯ ಎಂದು ತಿಳಿದೊಡನೆ ಗಾಬರಿ ಗೊಂಡಿದ್ದಾನೆ. ಈ ಆಕಸ್ಮಿಕ ದುರಂತದಿಂದ ಕಂಗೆಟ್ಟಿರುವ ದಿನೇಶ್ ಮಾವ ಪೂವಯ್ಯ ಅವರ ಮೆನೆಗೆ ಏದುಸಿರು ಬಿಡುತ್ತಾ ಓಡಿಬಂದಿದ್ದ ನಾದರೂ, ಅಲ್ಲಿ ತಲಪುವಷ್ಟರಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಹೋದನೆಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ.
ಆತನಿಗೆ ಉಪಚರಿಸಿ ಸುಧಾರಿಸಿ ಕೊಂಡ ಬಳಿಕ ವಾಸ್ತವಾಂಶ ತಿಳಿಯಲಾಗಿ, ರಂಜಿತ್ ಆಕಸ್ಮಿಕ ಗುಂಡೇಟಿಗೆ ಬಲಿಯಾಗಿರುವದು ಖಾತರಿಯಾಗಿದೆ. ಪರಿಣಾಮ ಉಭಯ ಕುಟುಂಬದವರು ದಿಕ್ಕು ತೋಚದಂತಾಗಿ, ಒಂದೆಡೆ ಅಳಿಯನ ಅಚಾತುರ್ಯಕ್ಕೆ ಮನೆ ಮಗ ಬಲಿಯಾಗಿದ್ದರಿಂದ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಆದರೆ ಪ್ರಕರಣದ ಬೆನ್ನೇರಿರುವ ಪೊಲೀಸ್ ಇಲಾಖೆಯು ಕಾನೂನಿನಡಿ ಕ್ರಮ ಕೈಗೊಂಡಿದೆ.
ತುಲಾ ಸಂಕ್ರಮಣ ಹಬ್ಬದಲ್ಲಿ ಹಿರಿಯರ ಆಶೀರ್ವಾದ ಪಡೆಯಲು ಪೂವಯ್ಯ ಮಗಳು
(ಮೊದಲ ಪುಟದಿಂದ) ಸುಧಾ ತನ್ನ ತವರು ಮನೆಗೆ ಬಂದಿದ್ದರೆ, ಪತಿ ದಿನೇಶ್ ಬೇಟೆಗೆ ತೆರಳಿ ಸೋದರ ಸಂಬಂಧಿ ರಂಜಿತ್‍ನನ್ನು ಬಲಿ ಪಡೆದಿರುವ ಆಕಸ್ಮಿಕ ಘಟನೆಯಿಂದ ದುಃಖದೊಂದಿಗೆ, ಗಂಡ ಜೈಲು ಪಾಲಾಗಿರುವ ಹಿನ್ನೆಲೆ ಮತ್ತಷ್ಟು ಕಂಗಾಲಾಗಿದ್ದಾಳೆ. ಇತ್ತ ಬಾವ ತನ್ನ ಮನೆಯಿಂದ ಕೋವಿಯೊಂದಿಗೆ ಬೇಟೆಗೆ ತೆರಳಿರುವ ತಪ್ಪಿಂದಾಗಿ ಆಕೆಯ ಸೋದರ ಸದಾ ಮುತ್ತಪ್ಪ ಕೂಡ ವಿಚಾರಣೆ ಎದುರಿಸುವಂತಾಗಿದೆ. ಈ ದುರ್ಘಟನೆಯಿಂದ ಹೆಮ್ಮೆತ್ತಾಳು ಅಯ್ಯಕುಟ್ಟಿರ ಕುಟುಂಬದೊಂದಿಗೆ, ವೆಸ್ಟ್‍ನೆಮ್ಮಲೆಯ ಕಾಳಿಮಾಡ ನಾಣಯ್ಯ ಕುಟುಂಬ ಕೂಡ ದೃತಿಗೆಟ್ಟಿದೆ.