ಮಡಿಕೇರಿ, ಅ. 24: ಮಡಿಕೇರಿ ನಗರದ ಅಲ್ಲಲ್ಲಿ ಯುವ ಜನಾಂಗದ ಅನೇಕರು ಗಾಂಜಾ ಹಾಗೂ ಇತರ ಮಾದಕ ದುಶ್ಚಟಗಳಿಗೆ ಬಲಿಯಾಗಿರುವ ಆರೋಪಗಳ ನಡುವೆಯೇ ನೂತನ ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ ಅವರು ಅಂತವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.ಕಳೆದ ವರ್ಷ ದಸರಾ ದಿನವೇ ಗಾಂಜಾ ದುಶ್ಚಟದ ಗುಂಪಿನ ಯುವಕನೊಬ್ಬ ಬಲಿಯಾಗಿದ್ದರೆ, ಈ ಬಾರಿಯ ದಸರಾ ಹಿಂದಿನ ದಿನ ಇಂತದೇ ಕೃತ್ಯದಲ್ಲಿ ಶಾಮೀಲಾಗಿರುವ ಯುವಕರಿಬ್ಬರು ಕ್ಯಾಂಟೀನ್‍ವೊಂದರ ಸಿಬ್ಬಂದಿಗೆ ಗುಂಡು ಹಾರಿಸಿ ಕಾನೂನು ಕ್ರಮಕ್ಕೆ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ನಡುವೆ ಇಂದು ಮಡಿಕೇರಿ ನಗರ ಪೊಲೀಸ್ ವೃತ್ತನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಷಣ್ಮುಗ ಮತ್ತು ಸಿಬ್ಬಂದಿ 9 ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ 9 ಮಂದಿ ವಿರುದ್ಧ ಮಾದಕ ಸೇವನೆ ಹಿನ್ನೆಲೆ ಎನ್‍ಡಿಪಿಎಸ್ 127 ಬಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.