ಸೋಮವಾರಪೇಟೆ, ಅ. 21: ಇಲ್ಲಿನ ಸೋಮೇಶ್ವರ ದೇವಾಲಯಲ್ಲಿ ಶರನ್ನವರಾತ್ರಿ ಉತ್ಸವವು, ವಿವಿಧ ಪೂಜಾ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ತೆರೆಕಂಡಿತು.

ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಕ್ತಿ ಪಾರ್ವತಿ ದೇವಿಯ ಉತ್ಸವ ಮೂರ್ತಿಯನ್ನು ವಿಜಯದಶಮಿ ದಿನದಂದು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದ ಡೊಳ್ಳುಕುಣಿತ ಆಕರ್ಷಕವಾಗಿತ್ತು. ಇದರೊಂದಿಗೆ ಪಂಚವಾದ್ಯ, ಗೊಂಬೆಗಳ ನೃತ್ಯಗಳು ಮೆರವಣಿಗೆಗೆ ಮೆರುಗು ತಂದವು. ಆನೆಕೆರೆಯ ಬಳಿಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ‘ಬನ್ನಿ’ ಹಂಚಲಾಯಿತು. ನಂತರ ಕೆರೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಪದಾಧಿಕಾರಿಗಳಾದ ಸುದರ್ಶನ್ ಕೌಶಿಕ್, ರಾಜೇಶ್ ಪದ್ಮನಾಭ್, ಚಿತ್ರಕುಮಾರ್, ಶ್ಯಾಂ ಸುಂದರ್, ರವಿಶಂಕರ್, ಜಯಂತ್, ಹರೀಶ್, ದೇವಿ ಬಳಗದ ಅಧ್ಯಕ್ಷೆ ವಸಂತ ರಮೇಶ್, ಮಾತಾ ಬಳಗದ ಅಧ್ಯಕ್ಷೆ ಪಂಕಜಾ ಶ್ಯಾಂಸುಂದರ್, ಪ್ರಮುಖರಾದ ಎಸ್.ಆರ್. ಸೋಮೇಶ್, ಶ್ರೀಕಾಂತ್, ಅರ್ಚಕ ಪ್ರಸನ್ನ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.