ಒಡೆಯನಪುರ, ಅ. 21: ಪ್ರಕೃತಿ ವಿಕೋಪದಿಂದ ರೈತರ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಸಾಲ ಮನ್ನಾ ಸೇರಿದಂತೆ ದೀರ್ಘಾವಧಿ ಸಾಲದ ಬಡ್ಡಿ ದರವನ್ನು ಇಳಿಕೆ ಮಾಡುವದರ ಜೊತೆಯಲ್ಲಿ ಸರಕಾರ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಶನಿವಾರಸಂತೆ ಹೋಬಳಿ ಬೆಳೆಗಾರರ ಸ್ವ-ಸಹಾಯ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಸರಕಾರವನ್ನು ಒತ್ತಾಯಿಸಿದರು.

ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಲ ಪ್ರಳಯದಿಂದ ಅನೇಕ ಜನರು ಪ್ರಾಣ, ಆಸ್ತಿ-ಪಾಸ್ತಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರೆ, ಮತ್ತೊಂದು ಕಡೆಯಲ್ಲಿ ಅತೀ ಮಳೆಯಿಂದಾಗಿ ರೈತರ ಜೀವನಕ್ಕೆ ಆಧಾರವಾಗಿದ್ದ ಕಾಫಿ, ಕಾಳುಮೆಣಸು, ಭತ್ತ ಮುಂತಾದ ಕೃಷಿ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ರೈತರು ತೀವ್ರ ಸಂಕಟಕ್ಕೆ ಸಿಲುಕಿದ್ದಾರೆ ಎಂದರು. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಅತೀ ಮಳೆಯಿಂದ ರೈತರ ಕಾಫಿ, ಕಾಳುಮೆಣಸು ಮುಂತಾದ ಕೃಷಿ ಬೆಳೆಗಳು ಹಾನಿಗೊಳಗಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ನೆಪ ಮಾತ್ರಕ್ಕೆ ಹಾನಿಗೊಳಗಾದ ಕಾಫಿ ತೋಟಗಳ ಅವೈಜ್ಞಾನಿಕ ಸರ್ವೆ ನಡೆಸಿ, ಅಧಿಕಾರಿಗಳು ಸರಕಾರಕ್ಕೆ ಕೇವಲ ಶೇ. 30 ರಷ್ಟು ರೈತರು ಬೆಳೆದ ಕೃಷಿ ನಷ್ಟವಾಗಿದೆ ಎಂಬ ಸುಳ್ಳು ವರದಿಯನ್ನು ನೀಡಿರುವ ಹಿನ್ನೆಲೆ ಸಮರ್ಪಕ ವರದಿ ಸಲ್ಲಿಸುವಂತೆ ಆಗ್ರಹಿಸಿದರು. ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಸಿ. ಶರತ್‍ಶೇಖರ್ ಮಾತನಾಡಿ, ರೈತರ ಸಂಕಷ್ಟಕ್ಕೆ ಜನಪ್ರತಿನಿಧಿಗಳು, ಸರಕಾರ ಮತ್ತು ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಮಳೆಯಿಂದ ಹಾನಿಗೊಳಗಾದ ರೈತರ ತೋಟ-ಗದ್ದೆಗಳಿಗೆ ಹೋಗಿ ಸರ್ವೆ ಕಾರ್ಯ ಮಾಡದೆ ಎಲ್ಲೋ ಕುಳಿತುಕೊಂಡು ಸುಳ್ಳು ವರದಿಯನ್ನು ಕೊಟ್ಟಿದ್ದಾರೆ ಎಂದು ದೂರಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಮಲ್ಲೇಗೌಡ, ಸದಸ್ಯರಾದ ಎಸ್.ಡಿ. ಬಸವರಾಜು, ಮೂರ್ತಿ ಹಾಜರಿದ್ದರು.