ವೀರಾಜಪೇಟೆ, ಅ. 21: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಬೋಧಕ-ಪೋಷಕರ ಸಭೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಟ್ಟ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಿ. ಅರ್ಜುನ್ ತಿಮ್ಮಯ್ಯ ಮಾತನಾಡಿ, ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ದಾರಿತಪ್ಪಿ ಹೋಗುತಿದ್ದು, ಮಾದಕ ವಸ್ತುಗಳ ಮೇಲೆ ಒಲವು ಜಾಸ್ತಿಯಾಗಿ, ಕೋಪ, ಮುನಿಸು ಮುಂತಾದವು ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೆಡ್ ಕ್ರಾಸ್ ಮತ್ತು ಅಧ್ಯಾಪಕ ಪೋಷಕ ಸಂಘದ ಸಂಚಾಲಕ ವನಿತ್ಕುಮಾರ್, ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ದಾರಿತಪ್ಪುತ್ತಿದ್ದು, ಪೋಷಕರು ಇದರ ಕಡೆ ಗಮನ ಹರಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ವಹಿಸಿದ್ದರು. ಈ ಸಂದರ್ಭ ಕಾಲೇಜಿನ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು. ಸುಮಾರು 500 ಕ್ಕೂ ಹೆಚ್ಚು ಪೋಷಕರು ಭಾಗವಹಿಸಿದ್ದರು.