ಮಡಿಕೇರಿ, ಅ. 22: ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರವು ತಾ.24 ರಂದು ಬುಧವಾರ ಸಂಜೆ 6.30ಕ್ಕೆ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಟ, ನಿರ್ದೇಶಕ ಮಂಡ್ಯ ರಮೇಶ್ ನಿರ್ದೇಶನದ ‘ಚೋರ ಚರಣದಾಸ’ ನಾಟಕ ಪ್ರದರ್ಶನವನ್ನು ಆಯೋಜಿಸಿದೆ.

ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ತುತ್ತಾದವರ ನೆರವಿಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ.

ನಾಟಕಕಾರ ಹಬೀಬ್ ತನ್ವೀರ್ ಮೂರು ದಶಕದಷ್ಟು ಹಿಂದೆ ಬರೆದ ‘ಚೋರ ಚರಣದಾಸ’ ನಾಟಕ ಸಾರ್ವಕಾಲಿಕವೂ ಹೌದೆನ್ನುವಷ್ಟು ನೂತನ ಸತ್ಯಗಳನ್ನು ಧ್ವನಿಸುತ್ತದೆ. ಪ್ರಸ್ತುತ ಪ್ರಯೋಗವನ್ನು ಅತ್ಯಂತ ವಿಡಂಬನಾತ್ಮಕವಾಗಿ ಕೃತಿಯ ಆಂತರಿಕ ಧ್ವನಿಯೊಂದಿಗೆ ವರ್ತಮಾನದ ಜಾಯಮಾನಕ್ಕೆ ಒಗ್ಗುವ ಹಾಗೆ ಕಟ್ಟಲಾಗಿದೆ. ಕೊಡಗಿನಲ್ಲಿ ನಡೆಯುತ್ತಿರುವ ಈ ಪ್ರದರ್ಶನ ‘ನಟನ’ ರಂಗತಂಡದ 230ನೇ ಪ್ರಯೋಗ. ಮಂಡ್ಯ ರಮೇಶ್ ನೇತೃತ್ವದಲ್ಲಿ ಮೈಸೂರಿನಲ್ಲಿ ನಾಟಕ ತರಬೇತಿ ಶಿಬಿರ, ನಾಟಕ ಪ್ರದರ್ಶನ, ಸಂವಾದ, ರಂಗಗೀತೆಗಳ ಕಾರ್ಯಕ್ರಮ, ಹೀಗೆ ರಂಗ ಚಟುವಟಿಕೆಗಳಲ್ಲಿ ತೊಡಗಿರುವ ‘ನಟನ’ ಸಂಸ್ಥೆ ದೇಶದ ವಿವಿಧೆಡೆ ಮಾತ್ರವಲ್ಲ ವಿದೇಶಗಳಲ್ಲೂ ನಾಟಕ ಪ್ರದರ್ಶನಗಳನ್ನು ನೀಡಿ ಪ್ರಶಂಸೆಗೆ ಪಾತ್ರವಾಗಿದೆ.

ಕೊಡಗಿನೊಂದಿಗೆ ವಿಶೇಷ ನಂಟು ಹೊಂದಿರುವ ಮಂಡ್ಯ ರಮೇಶ್ ನಾಟಕ ಪ್ರದರ್ಶನಕ್ಕೆ ಅತಿಥಿಯಾಗಿ ಆಗಮಿಸಿ ಕೊಡಗಿನ ಜನರ ಸಂಕಷ್ಟದಲ್ಲಿ ನೆರವಾಗುವ ಅಭಿಲಾಷೆ ಹೊಂದಿದ್ದಾರೆ.

ನಾಟಕಕ್ಕೆ ಪ್ರವೇಶ ಉಚಿತವಿದ್ದು ರಂಗಾಸಕ್ತರು, ಕೊಡಗಿನ ಸಹೃದಯರು ಸ್ವಯಂಪ್ರೇರಿತರಾಗಿ ನೀಡುವ ದೇಣಿಗೆಯನ್ನು ಸಂತ್ರಸ್ತರ ನೆರವಿಗಾಗಿ ಬಳಸಲಾಗುವದು ಎಂದು ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ.