ಮಡಿಕೇರಿ, ಅ. 22: ನಗರದ ಮಾರುಕಟ್ಟೆ ಬಳಿ ಹಿಲ್ ರಸ್ತೆಯಲ್ಲಿರುವ ಬಾರ್‍ವೊಂದನ್ನು ಮುಚ್ಚುವ ಮೂಲಕ ತಕ್ಷಣ ಲೈಸನ್ಸ್ ರದ್ದುಗೊಳಿಸುವಂತೆ ಪಿಎಫ್‍ಐ ಸಂಘಟನೆ ನೇತೃತ್ವದಲ್ಲಿ ಅಲ್ಲಿನ ವರ್ತಕರು ಹಾಗೂ ಅಕ್ಕಪಕ್ಕ ನಿವಾಸಿ ಮಹಿಳೆಯರು ಇಂದು ಪ್ರತಿಭಟನೆ ನಡೆಸಿದರು. ಪಿಎಫ್‍ಐ ಜಿಲ್ಲಾಧ್ಯಕ್ಷ ಹ್ಯಾರೀಸ್, ನಗರಸಭಾ ಸದಸ್ಯರುಗಳಾದ ಅಮಿನ್ ಮೊಯ್ಸಿನ್, ಮನ್ಸೂರ್, ಪೀಟರ್ ಮೊದಲಾದವರು ಮಾತನಾಡಿ, ಬಾರ್ ಲೈಸನ್ಸ್ ರದ್ದುಪಡಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ಸಲ್ಲಿಸಿದರು.

ಮಡಿಕೇರಿ ನಗರದ ಹಿಲ್ ರಸ್ತೆಯಲ್ಲಿ ತಾ. 18 ರ ರಾತ್ರಿ 10 ಗಂಟೆ ಸಮಯದಲ್ಲಿ ಕಾವೇರಿ ಬಾರಿನ ಸಿಬ್ಬಂದಿ ಲೋಕೇಶ್ ಎಂಬಾತ ಹಫ್ತಾ ನೀಡಲು ನಿರಾಕರಿಸಿದ ಸಲಫಿ ಮಸೀದಿ ಕಟ್ಟಡದ ಕ್ಯಾಂಟೀನ್ ನಡೆಸುತ್ತಿರುವ ಇಬ್ಬರು ವ್ಯಕ್ತಿಗಳ ಮೇಲೆ ಏಕಾ ಏಕಿ ಗುಂಡಿನ ಧಾಳಿ ನಡೆಸಿದ್ದಾಗಿ ಆರೋಪಿಸಿದರು. ಈ ಪ್ರದೇಶದಲ್ಲಿ ಇಪ್ಪತ್ತು ಮೀಟರ್ ಅಂತರದಲ್ಲಿ ಮುಸ್ಲಿಮರ ಎರಡು ಮಸೀದಿಗಳಿದ್ದು, ಪಕ್ಕದಲ್ಲೇ ಬಾರ್ ನಡೆಸುತ್ತಿದ್ದಾರೆ. ಈ ಬಾರಿನಲ್ಲಿ ಪ್ರತಿನಿತ್ಯ ಮದ್ಯ ಪಾನಿಗಳಿಂದ ನಡೆದಾಡುವ ಪಾದಚಾರಿಗಳಿಗೆ, ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.

ಈ ಬಾರಿನಲ್ಲಿ ಪ್ರತಿನಿತ್ಯ ಹೊಡೆದಾಟ, ಗುಂಪು ದಾಂಧಲೆ ನಡೆಯುತ್ತಿದ್ದು, ಈ ಪ್ರದೇಶವು ವಸತಿ ಪ್ರದೇಶವಾಗಿದೆ, ಮಾತ್ರವಲ್ಲದೆ, ಮಾರುಕಟ್ಟೆ ಇದೆ. ಈ ಕಾವೇರಿ ಬಾರ್ ಹಾಸನ, ಕೊಣನೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದು, ವಾಹನ ಸಂಚಾರ, ಮಕ್ಕಳು, ಮಹಿಳೆಯರ ಓಡಾಟಕ್ಕೆ ತೊಂದರೆಯುಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ತಾ. 18 ರಂದು ನಗರದಲ್ಲಿ ಮದ್ಯ ಮಾರಾಟ ನಿಷೇಧವಿದ್ದರೂ, ಈ ಬಾರಿನ ಮೇಲ್ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಿರುವ ಬಗ್ಗೆ ಸ್ಥಳೀಯ ನಿವಾಸಿಗಳಿಂದ ದೂರು ಇದ್ದು, ಬಾರಿನ ಪರವಾನಗಿಯನ್ನು ರದ್ದುಗೊಳಿಸುವಂತೆ ಸಂಘಟನೆಯ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಿ ತಮಗೆ ಸೂಕ್ತ ಕ್ರಮಕ್ಕಾಗಿ ಈ ಮನವಿಯನ್ನು ಅರ್ಪಿಸುತ್ತಿದ್ದೇವೆ ಎಂದು ಪಿಎಫ್‍ಐ ಪದಾಧಿಕಾರಿಗಳು ಗಮನ ಸೆಳೆದಿದ್ದಾರೆ.