ಮಡಿಕೇರಿ, ಅ. 21: ದಶಕದ ಹಿಂದೆ ಕೊಡಗಿನಲ್ಲಿ ಶುಂಠಿಕೃಷಿಯ ನೆಪದಲ್ಲಿ ಕೇರಳದಿಂದ ನುಸುಳಿ ಬಂದಿದ್ದ ಅಪರಿಚಿತ ಯುವಕರ ತಂಡವೊಂದು, ಮಾದಾಪುರ ಬಳಿಯ ಹೊಸತೋಟದ ಲಕ್ಕೆರೆ ಪೈಸಾರಿಯಲ್ಲಿ ತಂಗುವದರೊಂದಿಗೆ, ‘ಸಿಮಿ’ ಸಂಘಟನೆಯ ಮೂಲಕ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದಲ್ಲದೆ, ಲಕ್ಷ್ಮೀ ಎಂಬ ಅಮಾಯಕ ಮಹಿಳೆಯ ಸಾವಿಗೂ ಕಾರಣವಾಗಿದ್ದ ಪ್ರಕರಣದ ಆರೋಪಿಯೊಬ್ಬ ದಶಕದ ಬಳಿಕ ಸೆರೆಯಾಗಿದ್ದಾನೆ. ಬಂಧಿತನು ಕೇರಳದ ಕಣ್ಣೂರು ಬಳಿಯ ಪಿನರಾಯ್ ಗ್ರಾಮದ ನಿವಾಸಿ ಸಲೀಂ ಎಂಬವನಾಗಿದ್ದಾನೆ.ಆರೋಪಿಯು ನಿಷೇಧಿತ ಸಿಮಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಅದರ ಮುಖ್ಯಸ್ಥ ಅಬ್ದುಲ್ ನಾಸರ್ ಮದನಿ ಹಾಗೂ ತಡಿಯಂಡವೀಡ್ ನಾಸರ್‍ನೊಂದಿಗೆ ನಿಕಟ ಸಂಪರ್ಕದೊಂದಿಗೆ, ಹೊಸತೋಟದಲ್ಲಿ ತನ್ನ ಸಹಚರರೊಂದಿಗೆ ತಂಗಿದ್ದಲ್ಲದೆ, ವಿದ್ರೋಹಿ ಕೃತ್ಯಗಳ ಬಗ್ಗೆ ಕೆಲವಷ್ಟು ಯುವಕರಿಗೆ ತರಬೇತುಗೊಳಿಸಿರುವ ಹಿನ್ನೆಲೆಯಲ್ಲಿ ದಶಕದಿಂದ ತಲೆಮರೆಸಿಕೊಂಡಿದ್ದಾಗಿ ಬೆಂಗಳೂರು ಕೇಂದ್ರ ಅಪರಾಧ ಪತ್ತೆದಳ ವಿಶೇಷ ಘಟಕದ ಅಧಿಕಾರಿಗಳು ಸುಳಿವು ನೀಡಿದ್ದಾರೆ.
ಆರೋಪಿಯ ಇರುವಿಕೆ: ಬೆಂಗಳೂರಿನಲ್ಲಿ 2008ರ ಜುಲೈನಲ್ಲಿ ಹಲವೆಡೆ ಸ್ಫೋಟದೊಂದಿಗೆ, ಈ ಸರಣಿ ಬಾಂಬ್‍ಸ್ಫೋಟದಿಂದ ಕರ್ನಾಟಕದ ರಾಜಧಾನಿಯನ್ನು ತಲ್ಲಣಗೊಳಿಸಲಾಗಿತ್ತು. ಅನಂತರದಲ್ಲಿ ದಶಕಗಳ ಕಾಲ ಆರೋಪಿ ಸಲೀಂ ತಲೆಮರೆಸಿಕೊಂಡಿದ್ದಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಕೇರಳದ ಅರಣ್ಯದಲ್ಲಿ ಸುಳಿದಾಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಬೆಂಗಳೂರು ಕೇಂದ್ರ ತನಿಖಾ ವಿಶೇಷ ದಳ ಅಧಿಕಾರಿಗಳು, ಕಣ್ಣೂರಿನ ಭಯೋತ್ಪಾದಕ ನಿಗ್ರಹ ದಳ ಮುಖ್ಯಸ್ಥರನ್ನು ಸಂಪರ್ಕಿಸಿ ಇದೇ ತಿಂಗಳ ಮೊದಲ ವಾರ ಜಂಟಿ ಕಾರ್ಯಾಚರಣೆ ಮೂಲಕ ಸಲೀಂನ ಬಂಧನಕ್ಕೆ ಬಲೆ ಬೀಸಿದ್ದರು. ಇತ್ತೀಚೆಗೆ ಸಂಬಂಧಿಕರೊಬ್ಬರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಸಲೀಂ ನಿಶ್ಚಿತವಾಗಿ ಬರುವ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು.
ಅಂತೆಯೇ ಕಣ್ಣೂರು ಸಮೀಪದ ಕೂತುಪರಂಬುವಿನ ಪಿನರಾಯ್ ಗ್ರಾಮಕ್ಕೆ ಹೊಂದಿಕೊಂಡಿರುವ ದಟ್ಟಕಾನನದಿಂದ ಹೊರಬಂದಿರುವ ಆರೋಪಿಯು, ಅಲ್ಲಿನ ತನ್ನ ಮನೆಯಿಂದ ಬಟ್ಟೆ ಧರಿಸಿಕೊಳ್ಳಲು ನುಸುಳುವಷ್ಟರಲ್ಲಿ, ಶಸ್ತ್ರಸಜ್ಜಿತ ಕಾರ್ಯಾಚರಣೆ ತಂಡ ಮನೆಯನ್ನು ಸುತ್ತುವರಿದು ಆರೋಪಿ ಸಲೀಂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವೀರಾಜಪೇಟೆಯಿಂದ ಅಂದಾಜು 30 ಕಿ.ಮೀ. ದೂರದಲ್ಲಿರುವ ಅರಣ್ಯದಂಚಿನ ಪಿನರಾಯ್ ಗ್ರಾಮದಲ್ಲಿ ಇಂದು ತನಿಖೆ ಸಂಬಂಧ ಮಹಜರು ನಡೆಸಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.
ವೀರಾಜಪೇಟೆಯಲ್ಲಿ ರಾತ್ರಿ ಕಳೆದ ಆರೋಪಿ
ಕಳೆದ 2008ರಲ್ಲಿ ಬೆಂಗಳೂರಿನ 9 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಎರಡನೇ ಆರೋಪಿ ಸಲೀಂ (43) ಎಂದು ಗೊತ್ತಾಗಿದೆ. ಆರೋಪಿಯನ್ನು ಕೇಂದ್ರ ತನಿಖಾ ದಳ ಪೊಲೀಸರು ಬಂಧಿಸಿ, ವಿವಿಧೆಡೆಗಳಲ್ಲಿ ತನಿಖೆ ನಡೆಸಿ ಇಂದು ವೀರಾಜಪೇಟೆಯಿಂದ ಕಣ್ಣೂರಿಗೆ ಪೊಲೀಸ್ ಬಿಗಿ ಬಂದೋಬಸ್ತ್‍ನಲ್ಲಿ ಕರೆದೊಯ್ದು ವಿಚಾರಣೆ ನಡೆಸಿದರು.
ಅಂತರಾಷ್ಟ್ರೀಯ ಉಗ್ರಗಾಮಿ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಪಿ ಸಲೀಂ ಪಿನಾರಾಯ್ ಗ್ರಾಮದ ನಿವಾಸಿಯಾಗಿದ್ದು ಬೆಂಗಳೂರಿನ ಸಿ.ಸಿ.ಬಿ. ಇಲಾಖೆಯ ಡಿ.ಸಿ.ಪಿ. ಪಿ.ಟಿ. ಸುಬ್ರಮಣ್ಯ ನೇತೃತ್ವದಲ್ಲಿ ಬಂಧಿಸಿ ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ.
ಸಿಸಿಬಿ ಪೊಲೀಸರು ಸಲೀಂನನ್ನು ತನಿಖೆಗೊಳಪಡಿಸಿದಾಗ ಬಾಂಬ್ ಸ್ಫೋಟ ಪ್ರಕರಣದೊಂದಿಗೆ ಪ್ರಕರಣದ ಮೊದಲ ಆರೋಪಿ ಹಾಗೂ ಕೊಡಗಿ ನಲ್ಲಿ ಉಗ್ರಗಾಮಿಗಳಿಗೆ ತರಬೇತಿ ನೀಡಿದ್ದ ಮದನಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವದು, ಮದನಿ ನಾಯಕತ್ವದಲ್ಲಿಯೇ ಆತನ ಕೆಳಗೆ ಕೆಲಸ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ಮದನಿಯ ಸಲಹೆಯಂತೆ ಆರೋಪಿ ಸಲೀಂ ಮಾದಾಪುರ ಬಳಿಯ ಹೊಸ ತೋಟ ದಲ್ಲಿ ಕೆಲವರು ಯುವಕರಿಗೆ ತರಬೇತಿ ನೀಡುವದ ರೊಂದಿಗೆ ಶಸ್ತ್ರಾಸ್ತ್ರಗಳನ್ನು ಬಳಸುವ ತರಬೇತಿ ನೀಡುತ್ತಿದ್ದನು ಎನ್ನಲಾಗಿದೆ. ಇದೇ ರೀತಿಯಲ್ಲಿ ಕೇರಳದ ಪಿನಾರಾಯ್ ಅರಣ್ಯದ ಆಯ್ದ ನಾಲ್ಕು ಕಡೆಗಳಲ್ಲಿ ಉಗ್ರಗಾಮಿ ಗಳಿಗೆ ತರಬೇತಿ ಕೇಂದ್ರವನ್ನು ತೆರೆದು ತರಬೇತಿ ನೀಡುತ್ತಿದ್ದನೆಂದು ತನಿಖೆಯಿಂದ ಗೊತ್ತಾಗಿದೆ. ಇಂದು ಈ ಸ್ಥಳಕ್ಕೆ ಸಿಸಿಬಿ ಪೊಲೀಸರು ಖುದ್ದು ಭೇಟಿ ನೀಡಿ ಮಹಜರು ನಡೆಸಿದರು.
ಮೊದಲ ಆರೋಪಿ ಮದನಿ ಈಗ ನ್ಯಾಯಾಂಗ ಬಂಧನದಲ್ಲಿದ್ದು ಸಲೀಂ ಈ ಹಿಂದೆ ಕೊಡಗಿನಾದ್ಯಂತ ಸಂಚರಿಸಿ ಕೇರಳಕ್ಕೆ ಹೋಗಲು ವೀರಾಜಪೇಟೆ ಮಾರ್ಗವಾಗಿ ತೆರಳುತ್ತಿದ್ದುದ್ದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ಆರೋಪಿ ಕೇರಳದಲ್ಲಿ ಈಚೆಗೆ ದರೋಡೆ ಹಾಗೂ ಕೂತುಪರಂಬಿನಲ್ಲಿ ನಡೆದ ಯುವಕನೊಬ್ಬನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಪೊಲೀಸರಿಗೆ ಇದೆ.
ಬೆಂಗಳೂರಿನ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಟ್ಟು 30ಮಂದಿಗೂ ಅಧಿಕ ಆರೋಪಿಗಳಿದ್ದು ಈಗ 18ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪೈಕಿ ಕೆಲವು ಮಂದಿ 2013ರಲ್ಲಿ ಕಾಶ್ಮೀರದಲ್ಲಿ ನಡೆದ ಪೊಲೀಸ್ ಎನ್‍ಕೌಂಟರ್‍ನಲ್ಲಿ ಹತರಾಗಿರುವ ಶಂಕೆ ಇದೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ತರಬೇತಿ ಪಡೆದಿದ್ದ ಆರೋಪಿಯೊಬ್ಬ ಈ ತಂಡದಲ್ಲಿದ್ದು ಈತನು ಈಚೆಗೆ ಪಾಕಿಸ್ತಾನದಲ್ಲಿ ನಡೆದ ಪೊಲೀಸ್ ಘರ್ಷಣೆಯ ಎನ್‍ಕೌಂಟರ್‍ನಲ್ಲಿ ಸಾವನ್ನಪ್ಪಿರುವ ಶಂಕೆ ಇದೆ. ಈಗ ಸಲೀಂ ಬಂಧನದೊಂದಿಗೆ ಬಹುತೇಕ ಆರೋಪಿ ಗಳನ್ನು ಪೊಲೀಸರು ಬಂಧಿಸಿದಂತಾಗಿದೆ; ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಶಸ್ತಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ.
ನಿನ್ನೆ ದಿನ ರಾತ್ರಿ ಸಲೀಂನನ್ನು ವೀರಾಜಪೇಟೆಗೆ ಕರೆತಂದ ಪೊಲೀಸರು ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಬಂಧಿಖಾನೆಯಲ್ಲಿರಿಸಿ, ಸಿಸಿಬಿ ಅಧಿಕಾರಿಗಳ ಸಲಹೆಯಂತೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಭದ್ರತೆ ಸಲುವಾಗಿ ರಾತ್ರಿ ಪ್ರಯಾಣಿಸದೆ ಇಲ್ಲಿ ಇರಿಸಿದ್ದಾಗಿ ಪೊಲೀಸ್ ಪಡೆಯ ಡಿ.ಸಿ.ಪಿ.ಸುಬ್ರಮಣ್ಯ ಹಾಗೂ ಎಸಿಪಿ. ಮೋಹನ್‍ಕುಮಾರ್, ಹೇವಂತ್‍ಕುಮಾರ್ ತಂಡ ಸುಳಿವು ನೀಡಿದೆ.
ಆರೋಪಿ ಸಲೀಂ ಪಿನಾರಾಯ್‍ನ ಎಂ. ಮಮ್ಮುಟ್ಟಿ ಎಂಬವರ ಮಗನಾಗಿದ್ದು ಈತನಿಗೆ ಪತ್ನಿ, ಮೂವರು ಹೆಣ್ಣು ಹಾಗೂ ಒಬ್ಬ ಗಂಡು ಮಕ್ಕಳಿದ್ದಾರೆ. ಕೇರಳ ಹಾಗೂ ಕೊಡಗಿನಲ್ಲಿ ಉಗ್ರಗಾಮಿಗಳ ತರಬೇತಿ, ಬೆಂಗಳೂರಿನಲ್ಲಿ 9 ಕಡೆಗಳಲ್ಲಿ ಬಾಂಬ್ ಸ್ಫೋಟದ ನಂತರ ಸಲೀಂ ತಲೆಮರೆಸಿಕೊಂಡು ಸಂಚರಿಸುತ್ತಿದ್ದು ತಿಂಗಳಿಗೆ ನಾಲ್ಕೈದು ಬಾರಿ ಪಿನಾರಾಯ್‍ನ ಮನೆಗೆ ಬಂದು ಹೋಗುತ್ತಿದ್ದ ಜಾಡಿನ ಸುಳಿವು ಪಡೆದ ಸಿಸಿಬಿ ಪೊಲೀಸರಿಂದ ಬಂಧನ ಸಾಧ್ಯವಾಗಿದೆ.
- ವರದಿ: ಡಿಎಂಆರ್, ಕೆಕೆಎಸ್