ಮಡಿಕೇರಿ, ಅ. 21: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆಯು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಭಾರತ್ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಉತ್ತಮ ಸಮಾಜ ಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗು ತ್ತಿದೆ, ಇದನ್ನು ಮುಂದುವರಿಸಿಕೊಂಡು ಹೋಗುವಂತೆ ಅವರು ಸಲಹೆ ಮಾಡಿದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲಾಡಳಿತಕ್ಕೆ ತುಂಬಾ ಸಹಕಾರ ದೊರೆಯಿತು ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡೊಮೆಲೊ ಅವರು ಮಾತನಾಡಿ ಆದಷ್ಟು ಎಲ್ಲ ಶಾಲೆಗಳಲ್ಲೂ ವಿಭಾಗ ರಚನೆ ಮಾಡಬೇಕು ಮತ್ತು ಏಪ್ರಿಲ್ ತಿಂಗಳಿನಲ್ಲಿ ಕ್ರಿಯಾಯೋಜನೆ ತಯಾರಿಸಿ ಕಾರ್ಯರೂಪಕ್ಕೆ ತರಬೇಕು ಎಂಬುದನ್ನು ಚರ್ಚೆ ಮಾಡಿ ಕಾರ್ಯಗತಗೊಳಿಸಬೇಕು ಎಂದರು.
ಹೊಸ ಹೊಸ ತರಬೇತಿಗಳನ್ನು ಮೇ ತಿಂಗಳ ಕೊನೆಯಲ್ಲಿ ಇಟ್ಟುಕೊಂಡರೆ ಜೂನ್ ತಿಂಗಳಿನಲ್ಲಿ ಶಾಲೆ ಆರಂಭವಾಗುವ ಸಂದರ್ಭದಲ್ಲಿ ವಿಭಾಗಗಳನ್ನು ತೆರೆಯಲು ಅನುಕೂಲ ವಾಗುತ್ತದೆ ಎಂದು ತಿಳಿಸಿದರು.
ಮತ್ತೋರ್ವ ಉಪಾಧ್ಯಕ್ಷೆ ರಾಣಿ ಮಾಚಯ್ಯ ಮಾತಾನಾಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತನ್ನು ಕಲಿಸುತ್ತದೆ. ಒಳ್ಳೆ ಒಳ್ಳೆ ಕೆಲಸಗಳನ್ನು ಮಾಡಿ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದರು.
ಪ್ರಮುಖರಾದ ಸುರೇಶ್ ಚಂಗಪ್ಪ, ವೆಂಕಟಪ್ಪ, ಭಾಸ್ಕರ್, ಖಜಾಂಚಿ ಸೋಮಯ್ಯ, ತರಬೇತಿ ಆಯುಕ್ತೆ (ಗೈಡ್) ಸಗಾಯಮೇರಿ ಇತರರು ಇದ್ದರು. ಜಿಲ್ಲಾ ಪ್ರಧಾನ ಆಯುಕ್ತ ಕೆ.ಬಿ. ಕಾಳಪ್ಪ ಸ್ವಾಗತಿಸಿ, ಸಂಸ್ಥೆಯ ಕಟ್ಟಡವು ದುರಸ್ತಿಗೊಂಡಿದ್ದು, ಸರಿಪಡಿಸಿ ಕೊಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.