ಸೋಮವಾರಪೇಟೆ, ಅ. 22: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 9 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮೈತ್ರಿಕೂಟಕ್ಕೆ ಸೆಡ್ಡು ಹೊಡೆದಿದ್ದು, ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಈ ಬಾರಿ ಅಧಿಕಾರವನ್ನು ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದು, ಹಲವಷ್ಟು ತಂತ್ರಗಾರಿಕೆ ನಡೆಸಿದ್ದ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಮೈತ್ರಿಕೂಟದ ಅಭ್ಯರ್ಥಿಗಳು ಕೇವಲ 4 ಸ್ಥಾನಗಳಿಸುವ ಮೂಲಕ ಅಧಿಕಾರದ ಆಸೆಯನ್ನು ಕೈಬಿಟ್ಟಿದ್ದಾರೆ.
ಸಂಘದ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಲಗಾರರ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ 6 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಕೆ.ಪಿ. ರೋಶನ್ (362 ಮತ), ಮಾಜಿ ಅಧ್ಯಕ್ಷ ಎಂ.ಎಂ. ಬೋಪಯ್ಯ (307), ಎಚ್.ಬಿ. ಶಿವಕುಮಾರ್ (292) ಜಯಗಳಿಸಿದ್ದು, ಉಳಿದ ಮೂರು ಸ್ಥಾನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಲ್.ಎಂ. ರಾಜೇಶ್ (283), ಡಿ.ಕೆ. ಪೂವಯ್ಯ (ರವಿ) (269), ಡಿ.ಎಸ್. ಚಂಗಪ್ಪ (260) ಜಯ ಸಾಧಿಸಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ಕೆ. ರಘು (20), ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಜೆ. ಬಸಪ್ಪ (368), ಪ.ಪಂಗಡ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಜೆ.ಎಚ್. ರಾಜು (319) ಜಯಗಳಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಸ್.ಜೆ. ರಾಣಿ (315) ಮತ್ತು ಡಿ.ಸಿ. ಸಬಿತ (311), ಹಿಂದುಳಿದ ವರ್ಗ (ಎ) ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಡಿ.ಎಚ್.ವಿಶ್ವನಾಥರಾಜೇ ಅರಸ್ (338) ಮತ್ತು ಬಿ.ಸಿ. ಸುನಿಲ್ (301) ಜಯಗಳಿಸಿದ್ದಾರೆ.
ಚುನಾವಣಾಧಿಕಾರಿಯಾಗಿ ಐಗೂರು ಗ್ರಾಮ ಪಂಚಾಯಿತಿ ಪಿಡಿಒ ಲಿಂಗರಾಜ್, ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಎನ್.ಚಂದ್ರೇಗೌಡ ಕಾರ್ಯನಿರ್ವಹಿಸಿದರು.