ಮಡಿಕೇರಿ, ಅ. 20: ಪ್ರಾಕೃತಿಕ ವಿಕೋಪದ ಸಂದರ್ಭ ನಲುಗಿದ ಕಾಲೂರು ಗ್ರಾಮಸ್ಥರಿಗೆ ಭಾರತೀಯ ವಿದ್ಯಾಭವನ ಸಹಾಯ ಹಸ್ತ ಚಾಚಿದೆ. ಮಹಿಳೆಯರಿಗೆ ಕೈಯ್ಯಲ್ಲೊಂದು ಉದ್ಯೋಗವಿದ್ದರೆ ಆ ಸಂಸಾರ ಆರ್ಥಿಕ ಭದ್ರತೆಯಿಂದ ಕೂಡಿರುವ ಆಶಾಭಾವನೆಯೊಂದಿಗೆ ಸಂತ್ರಸ್ತ ಮಹಿಳೆಯರಿಗೆ ಕೌಶಲ್ಯ ತರಬೇತಿ ಕೊಡಲು ಚಿಂತನೆಯ ಫಲವಾಗಿ ಹೊಲಿಗೆ ತರಬೇತಿ ಮತ್ತು ಮಸಾಲೆ- ಅಡುಗೆ ತರಬೇತಿ ನಡೆಸಲು ಯೋಜನೆಯೊಂದನ್ನು ರೂಪಿಸಲಾಗಿದೆ. ಈ ಯೋಜನೆಗೆ ಭಾರತೀಯ ವಿದ್ಯಾಭವನದೊಂದಿಗೆ ಹೆಗಲೆಣೆಯಾಗಿ ‘ಪ್ರಾಜೆಕ್ಟ್ ಕೂರ್ಗ್’ ಗೆಳೆಯರ ಬಳಗದ ಸಹಕಾರ ನೀಡಿದೆ. ಇದೀಗ “ಯಶಸ್ವಿ” ‘ಸಂತ್ರಸ್ತರಿಗೆ ಕೌಶಲ್ಯ ತರಬೇತಿ ಕೇಂದ್ರ’ ಕಾಲೂರು ಗ್ರಾಮದ ಅಂಗನವಾಡಿ ಕಟ್ಟಡದಲ್ಲಿ ತಲೆಯೆತ್ತಲು ಸಹಕಾರಿಯಾಗಿದೆ.
ತಾ. 21ರಂದು (ಇಂದು) ಹಗಲು 10.30 ಗಂಟೆಗೆ ಸಂತ್ರಸ್ತರಿಗೆ ಕೌಶಲ್ಯ ತರಬೇತಿ ಕೇಂದ್ರ ಕಾಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉದ್ಘಾಟನೆಗೊಳ್ಳಲಿದ್ದು, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಭಾರತೀಯ ವಿದ್ಯಾಭವನ ಹಾಗೂ ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೆ.ಎಸ್.ದೇವಯ್ಯ, ಭಾರತೀಯ ವಿದ್ಯಾಭವನ ಕಾರ್ಯದರ್ಶಿ ಹಾಗೂ ಪ್ರಾಜೆಕ್ಟ್ ಕೂರ್ಗ್ ಸಂಚಾಲಕ ಬಾಲಾಜಿ ಕಶ್ಯಪ್, ಸಾಹಿತಿ ನಾಗೇಶ್ ಕಾಲೂರು ಸೇರಿದಂತೆ ಗಣ್ಯರು, ಗ್ರಾಮಸ್ಥರು ಭಾಗವಹಿಸಲಿದ್ದಾರೆ.