ಕೂಡಿಗೆ, ಅ. 20: ಕೂಡಿಗೆ ಸೈನಿಕ ಶಾಲೆಯಲ್ಲಿ 19 ಕರ್ನಾಟಕ ಎನ್‍ಸಿಸಿ ಬೆಟಾಲಿಯನ್ ಮಡಿಕೇರಿ ಆಶ್ರಯದಲ್ಲಿ ತಾ. 15 ರಿಂದ 24 ವರೆಗೆ ಹತ್ತು ದಿನಗಳವರೆಗೆ ಸುಮಾರು 352 ಎನ್‍ಸಿಸಿ ಕೆಡೆಟ್‍ಗಳು ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ತರಬೇತಿ ಕಾರ್ಯಾಗಾರದಲ್ಲಿ ಸೈನಿಕ ಶಾಲೆಯಲ್ಲಿ 250 ಕೆಡೆಟ್‍ಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧ ಶಾಲೆಗಳ ಎನ್‍ಸಿಸಿ ಕೆಡೆಟ್‍ಗಳು ಹಾಗೂ ಪುತ್ತೂರು, ಸುಳ್ಯದ ಎನ್‍ಸಿಸಿ ಕೆಡೆಟ್‍ಗಳು ಪಾಲ್ಗೊಂಡಿದ್ದಾರೆ.

ತರಬೇತಿ ಕಾರ್ಯಾಗಾರವನ್ನು ಕ್ಯಾಂಪ್ ಕಮಾಂಡೆಡ್ ಕರ್ನಲ್ ವಿ.ಎಂ. ನಾಯಕ್ ಉದ್ಘಾಟಿಸಿ ಮಾತನಾಡಿ, ಎನ್‍ಸಿಸಿ ಕೆಡೆಟ್‍ಗಳು ಸೈನ್ಯಕ್ಕೆ ಸೇರಿ ದೇಶವನ್ನು ರಕ್ಷಿಸುವ ಮಹತ್ ಕಾರ್ಯಕ್ಕೆ ಮುಂದಾಗಬೇಕು. ವಿದ್ಯಾರ್ಥಿಗಳು ಮಹತ್ವದ ಗುರಿಯನ್ನು ಇಟ್ಟುಕೊಂಡು, ಶಿಸ್ತನ್ನು ಮೈಗೂಡಿಸಿ ಕೊಂಡು ಗುರಿಯನ್ನು ತಲಪಬಹುದು ಎಂದರು.

ಎನ್‍ಸಿಸಿ ಕೆಡೆಟ್‍ಗಳಿಗೆ ಡ್ರಿಲ್, ಶಸ್ತ್ರಾಸ್ತ್ರ ತರಬೇತಿ, ಫೈರಿಂಗ್, ಮ್ಯಾಫ್ ರೀಡಿಂಗ್, ಕಂಪಾಸ್ ಬಳಕೆ ಹಾಗೆಯೇ ದೈಹಿಕ ಕಸರತ್ತು, ಯೋಗ ತರಬೇತಿ, ಪ್ರಕೃತಿ ವಿಕೋಪ ಸಂಭಂವಿಸಿದ ಸಂದರ್ಭ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ, ಸೈನ್ಯದ ವಿವಿಧ ಪಠ್ಯ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಭಾರತೀಯ ಸಂಸ್ಕøತಿಯ ಪರಂಪರೆಯನ್ನು ಬಿಂಬಿಸುವ ಸಾಂಸ್ಕøತಿಕ ಚಟುವಟಿಕೆಗಳ ಬಗ್ಗೆ ಕೆಡೆಟ್‍ಗಳಿಗೆ ಅರಿವು ಮೂಡಿಸಲಾಗುತ್ತದೆ.

ಫೈರಿಂಗ್‍ನಲ್ಲಿ ವಿವಿಧ ಹಂತದ ಮತ್ತು ಅತ್ಯಾಧುನಿಕ ಮಾದರಿಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಕೆಡೆಟ್‍ಗಳಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ, ಭಾಷಣದ ಬಗ್ಗೆ ಪ್ರತಿದಿನ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಗುವದು ಎಂದು ಕರ್ನಲ್ ವಿ.ಎಂ. ನಾಯಕ್ ಹೇಳಿದರು.

ಈ ಸಂದರ್ಭ ಕ್ಯಾಂಪ್‍ನ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಕ್ಯಾಪ್ಟನ್ ದಿನೇಶ್, ಲೆಫ್ಟಿನೆಂಟ್ ಜಾನ್ಸನ್, ಲೆಫ್ಟಿನೆಂಟ್ ವಿಭಿನ್‍ಕುಮಾರ್, ಎಸ್.ಓ. ರಾಮಣ್ಣ, ಎಸ್.ಓ. ಮಂಜಪ್ಪ ಇದ್ದರು.