ಮಡಿಕೇರಿ, ಅ. 20: ಎರಡೂವರೆ ತಿಂಗಳ ಹಿಂದೆ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜಿನ ಹಿಂಭಾಗದ ಮನೆಯೊಂದರ ಮೇಲೆ ಗುಂಡು ಹಾರಿಸಿ ನಡುರಾತ್ರಿಯಲ್ಲಿ ಭಯ ಹುಟ್ಟಿಸಿದ್ದ ಆರೋಪಿಗಳಿಬ್ಬರು, ಇದೀಗ ಮತ್ತೆ ನಗರದ ಮಾರುಕಟ್ಟೆ ಬಳಿ ಯುವಕರಿಬ್ಬರ ಮೇಲೆ ಗುಂಡು ಹಾರಿಸಿ ಘಾಸಿಗೊಳಿಸಿರುವ ದುಷ್ಕøತ್ಯ ತಾ. 18ರಂದು ರಾತ್ರಿ ಘಟಿಸಿದೆ. ಮಾರುಕಟ್ಟೆ ಬಳಿಯ ಭಾರ್‍ವೊಂದರ ಉಸ್ತುವಾರಿ ನೋಡಿಕೊಂಡಿರುವ ಲೋಕೇಶ್ ಹಾಗೂ ಅಕ್ರಂ ಎಂಬವರೇ ಪೊಲೀಸರಿಂದ ಈ ಕೃತ್ಯ ಸಂಬಂಧ ಬಂಧಿತ ಆರೋಪಿಗಳಾಗಿದ್ದಾರೆ.
ತಾ. 18ರಂದು ರಾತ್ರಿ ಆರೋಪಿ ಲೋಕೇಶ್ ಪಕ್ಕದಲ್ಲೇ ಇರುವ ಕ್ಯಾಂಟೀನ್‍ನಿಂದ ಅಕ್ರಂ ಮುಖಾಂತರ ಗೋಬಿ ಮಂಚೂರಿ ತರಿಸಿದ್ದಾನೆ. ಬಳಿಕ ಮತ್ತೆ ‘ಎಗ್‍ರೋಲ್’ ಪಾರ್ಸಲ್‍ಗಾಗಿ ಬಂದಾಗ, ಕ್ಯಾಂಟೀನ್‍ನ ಶಮೀಮ್ ಹಣ ನೀಡಿ ಕೊಂಡೊಯ್ಯುವಂತೆ ಹೇಳಿದನೆನ್ನಲಾಗಿದೆ. ಅಷ್ಟಕ್ಕೇ ಕೆರಳಿರುವ ಆರೋಪಿಗಳು ಹಲ್ಲೆ ನಡೆಸಿ ತೆರಳಿದ್ದಾರೆ.
ಈ ಹಿಂದೆಯೂ ಅನೇಕ ಸಲ ತಿನಿಸುಗಳನ್ನು ಕ್ಯಾಂಟೀನ್‍ನಿಂದ ಒಯ್ದಿರುವ ಆರೋಪಿಗಳು ಹಣ ನೀಡದ ಕಾರಣ, ಅಲ್ಲೇ ಇದ್ದ ಪಕ್ಕದ ಪ್ರಾರ್ಥನಾ ಮಂದಿರದ ಬೋಧಕ ರಿಯಾಜ್ ಅಹ್ಮದ್ ಹಾಗೂ ಶಮೀಮ್ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಅದನ್ನೇ ನೆಪ ಮಾಡಿಕೊಂಡಿರುವ ಲೋಕೇಶ್ ಹಾಗೂ ಅಕ್ರಂ ಬಾರ್‍ನತ್ತ ಹಿಂತಿರುಗಿದ್ದಾರೆ. ಬಾರ್‍ನ ಮೇಲಂತಸ್ತಿನಿಂದ ಕ್ಯಾಂಟೀನ್ ಕಿಟಕಿ ಮೂಲಕ ಗುಂಡಿನ ಧಾಳಿ ನಡೆಸಿದ್ದಾರೆ.
ಆರೋಪಿ ಲೋಕೇಶ್ ತನ್ನ ಒಂಟಿ ನಳಿಕೆ ಕೋವಿಯಿಂದ ಮೂರು ಸುತ್ತು ಗುಂಡು ಹಾರಿಸಿದ್ದು, ಪರಿಣಾಮ ರಿಯಾಜ್ ಅಹ್ಮದ್‍ನ ತೊಡೆ ಹಾಗೂ ಕೈಗೆ ಗಾಯಗಳಾಗಿವೆ.
ಇನ್ನು ಶಮೀಮ್ ಕಾಲಿಗೆ ಗುಂಡು ಹೊಕ್ಕಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೇಲಿಂದ ಮೇಲೆ ಗುಂಡಿನ ಧಾಳಿಯಿಂದ ಅಕ್ಕಪಕ್ಕದಲ್ಲಿರುವವರು ಭಯಭೀತರಾಗಿದ್ದಾರೆ. ಈ ವೇಳೆ ಒಂದು ಗುಂಡು ರಿಯಾಜ್ ಹಾಗೂ ಮತ್ತೊಂದು ಶಮೀಮ್‍ನನ್ನು ಗಾಯಗೊಳಿಸಿದ್ದು, ಮೂರನೆಯ ಗುಂಡು ಪಕ್ಕದ ಗೋಡೆಯನ್ನು ಹೊಕ್ಕಿರುವ ದೃಶ್ಯ ಗೋಚರಿಸಿದೆ.
ವಿಷಯ ತಿಳಿದ ಪೊಲೀಸರು ಆರೋಪಿಗಳಿಬ್ಬರನ್ನು ಕೋವಿ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸುವದರೊಂದಿಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಹಿನ್ನೆಲೆ
ಆರೋಪಿ ಲೋಕೇಶ್ ಹಾಗೂ ಅಕ್ರಂ ಕಳೆದ ಜುಲೈ 29ರಂದು ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಹಿಂಭಾಗದ ಮನೆಯೊಂದರ ಮೇಲೆ ಗುಂಡಿನ ಧಾಳಿ ನಡೆಸಿ ಭಯ ಸೃಷ್ಟಿಸಿರುವ ಪ್ರಕರಣ ಸೇರಿದಂತೆ ಇತರ ಅಪರಾಧ ಹಿನ್ನೆಲೆ ಹೊಂದಿರುವದಾಗಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಖಚಿತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪನ್ನೇಕರ್ ಘಟನಾ ಸ್ಥಳ ಪರಿಶೀಲಿಸಿದ್ದು, ಠಾಣಾಧಿಕಾರಿ ಷಣ್ಮುಖಪ್ಪ ಹಾಗೂ ಸಿಬ್ಬಂದಿ ಮಹಜರು ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವದರೊಂದಿಗೆ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.