ಮಡಿಕೇರಿ, ಅ. 20: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವ ಈ ಬಾರಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ತನ್ನ ವೈಭವವನ್ನು ಕಳೆದುಕೊಂಡಿತ್ತು. ಮಳೆ ದುರಂತದಿಂದಾಗಿ ಜಿಲ್ಲೆಯಲ್ಲಿ ಸಾವು-ನೋವು ಸಂಭವಿಸಿದ ಪರಿಣಾಮ ಸರಳ ಆಚರಣೆಗೆ ಸೀಮಿತಗೊಂಡಿದ್ದ ಜನೋತ್ಸವಕ್ಕೆ ಆಗಮಿಸುವ ಜನರ ಸಂಖ್ಯೆ ಕಡಿಮೆಯಾಗುವದೊಂದಿಗೆ ದಸರೆಯ ರಂಗು ಕುಂದಿತು.ದಸರಾ ಉತ್ಸವದ ಹಿನ್ನೆಲೆಯಲ್ಲಿ ಮಂಜಿನ ನಗರಿಯಲ್ಲಿ ಪೊಲೀಸ್ ಬಂದೋಬಸ್ತನ್ನು ಬಿಗಿಗೊಳಿಸಲಾಗಿತ್ತು. ಸಂಜೆ 4 ಗಂಟೆಯ ಬಳಿಕ ನಗರದೊಳಕ್ಕೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಧ್ಯಾಹ್ನದ ವೇಳೆ ಕೆಲ ಕಾಲ ಧಾರಾಕಾರ ಮಳೆ ಸುರಿಯಿತಾದರೂ ದಶಮಂಟಪಗಳ ತಯಾರಿ ಭರದಿಂದ ಸಾಗಿತ್ತು. ಆದರೆ ಜನಸಂಖ್ಯೆ ಮಾತ್ರ ಬೆಳಗ್ಗಿನಿಂದಲೇ ನಗರ ವ್ಯಾಪ್ತಿಯಲ್ಲಿ ಕಡಿಮೆಯಿತ್ತು. ರಾತ್ರಿ ದಶಮಂಟಪಗಳ ಶೋಭಾಯಾತ್ರೆ ವೇಳೆಗಾದರೂ ಹೆಚ್ಚಿನ ಜನ ಮಂಜಿನ ನಗರಿಯನ್ನು ಪ್ರವೇಶಿಸಲಿದ್ದಾರೆ ಎಂಬ ನಿರೀಕ್ಷೆಯೂ ಹುಸಿಯಾಯಿತು. ಕಾಲಿಡುವದಕ್ಕೂ ಪರದಾಡುವಷ್ಟು ಜನಸಂದಣಿ ಕಂಡು ಬರುತ್ತಿದ್ದ ಮಡಿಕೇರಿಯಲ್ಲಿ ನಿರಾಯಾಸವಾಗಿ ನಡೆದಾಡಬಹುದಾದಂತಹ ವಾತಾವರಣ ಸೃಷ್ಟಿಯಾಗಿತ್ತು.

ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಅದೆಷ್ಟೋ ಕಟ್ಟಡಗಳು ಈ ಬಾರಿ ಕತ್ತಲಿನಲ್ಲಿ ಮುಳುಗಿದ್ದವು. ನಗರಸಭೆ ಬಳಿ ರಾರಾಜಿಸುತ್ತಿದ್ದ ದೇವತೆಗಳ ವಿದ್ಯುತ್ ಅಲಂಕೃತ ಕಟೌಟ್‍ಗಳು ಕೂಡ ಈ ಬಾರಿ ಕಂಡು ಬರಲಿಲ್ಲ. ವಿಜಯದಶಮಿಯ ಒಂದು ದಿನಕ್ಕೆ ಸೀಮಿತವಾಗಿ ಗಾಂಧಿಮೈದಾನ ಕಲಾಸಂಭ್ರಮ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತಾದರೂ, ಅಲ್ಲಿಯೂ ಕೂಡ ಕಲಾಸಕ್ತ ಕೊರತೆ ಎದ್ದು ಕಾಣುತಿತ್ತು. ರಾತ್ರಿ 10 ಗಂಟೆಗೆ ನಿಗದಿಯಾಗಿದ್ದ ದಸರಾ ಸಮಾರಂಭ ಕಾರ್ಯಕ್ರಮಕ್ಕೆ ಯಾವ ಅತಿಥಿಗಳೂ ಆಗಮಿಸದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಎಂಬಂತೆ ಸಭಾಕಾರ್ಯಕ್ರಮ ರದ್ದುಗೊಂಡಿತು.

ಸರಕಾರದ ಅನುದಾನ 50 ಲಕ್ಷ ಕೊನೆ ಹಂತದಲ್ಲಿ ಬಂದ ಪರಿಣಾಮ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಗೆ ದಸರಾ ಸಮಿತಿಗೆ ಕಷ್ಟವಾಯಿತು. ಕೊನೆ ಗಳಿಗೆಯಲ್ಲಿ ಒಂದು ದಿನಕ್ಕೆ ಸೀಮಿತವಾಗಿ ವಿಜಯದಶಮಿಯಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತಾದರೂ ಕಾರ್ಯಕ್ರಮಗಳ ಕುರಿತು ಜನತೆಗೆ ಸೂಕ್ತ ಮಾಹಿತಿ ಲಭ್ಯವಾಗದೆ ಗಾಂಧಿ ಮೈದಾನದಲ್ಲಿ ಅಳವಡಿಸಲಾಗಿದ್ದ ಸಣ್ಣ ಶಾಮಿಯಾನವೂ ಭರ್ತಿಯಾಗದಷ್ಟು ಕಲಾಭಿಮಾನಿಗಳ ಕೊರತೆ ಕಂಡುಬಂತು.

ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ನೋವಿನಲ್ಲಿದ್ದ ಶಾಸಕರುಗಳು ಸರಳಾ ದಸರಾ ಆಚರಣೆ ಬೇಕು ಎಂದಿದ್ದರು. ಎಲ್ಲದಕ್ಕೂ ಮೊದಲೇ ದಶಮಂಟಪಗಳು ಸರಳ ದಸರಾ ಎಂದು ಘೋಷಿಸಿದ್ದವು. ಆದರೂ ಸ್ಪರ್ಧೆ ಇಲ್ಲದ ಕಾರಣ ಮಂಟಪಗಳ ಬಗ್ಗೆ ಜನರಲ್ಲಿ ಈ ಹಿಂದಿನ ಕುತೂಹಲ ಇರಲಿಲ್ಲ. ಒಟ್ಟು ವ್ಯವಸ್ಥೆಗಳ ಬಗ್ಗೆ ಈ ಹಿಂದಿನ ವರ್ಷಗಳಂತೆ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಲಿಲ್ಲ. ಆಗಸ್ಟ್ ದುರಂತದ ಬಳಿಕ ಕೊಡಗು ಚೇತರಿಸಿಕೊಳ್ಳುತ್ತಿದ್ದರೂ ಕೊಡಗಿನ ಸಣ್ಣ ಮಳೆಗೂ ಆತಂಕದಲ್ಲಿ ಕೊಡಗು ಎಂದು ಪ್ರತಿಬಿಂಬಿತವಾದ ಪರಿಣಾಮ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ.

ಪ್ರತಿವರ್ಷ ಜನಜಂಗುಳಿಯಿಂದ ಕಿಷ್ಕಿಂದೆಯಾಗಿ ಮಾರ್ಪಾಡುತ್ತಿದ್ದ ಜಿ.ಟಿ. ವೃತ್ತ, ಖಾಸಗಿ ಬಸ್ ನಿಲ್ದಾಣ, ಚೌಕಿ ಮತ್ತಿತರ ಕಡೆಗಳಲ್ಲಿ ಈ ಬಾರಿ ನಿರಾತಂಕ ನಡಿಗೆಗೆ ತೊಂದರೆಯಾಗಲಿಲ್ಲ. ನೂಕುನುಗ್ಗಲು ಕಂಡು ಬರಲಿಲ್ಲ. ದಶಮಂಟಪಗಳು ಬಿರಬಿರನೆ ಸಿದ್ಧಗೊಂಡು ಮುಖ್ಯ ರಸ್ತೆಗೆ ಬಂದವು. ಸರಳ ದಸರಾ ಹಿನ್ನೆಲೆಯಲ್ಲಿ ಮಂಟಪಗಳು ಅದ್ಧೂರಿಯಾಗಿ ಇರಲಾರವು ಎಂದು ಊಹಿಸಲಾಗಿತ್ತಾದರೂ ಹತ್ತು ಮಂಟಪಗಳು ಕೂಡ ಆಕರ್ಷಕವಾಗಿ ತಯಾರಾಗಿದ್ದವು. ಒಂದೆರಡು ವ್ಯವಸ್ಥೆಗಳಲ್ಲಿನ ಬದಲಾವಣೆ ಹೊರತುಪಡಿಸಿ ಉಳಿದಂತೆ ಮಂಟಪಗಳು ಜನಮನ ಸೂರೆಗೊಂಡವು.