ಧರ್ಮ ಎನ್ನುವುದು ಒಂದು ವರ್ಗದ ಜನರು ಒಂದು ಚೌಕಟ್ಟಿನಡಿಯಲ್ಲಿ ಬದುಕನ್ನು ರೂಪಿಸಿಕೊಳ್ಳಲು ಇರುವ ಒಂದು ವ್ಯವಸ್ಥೆ. ಪುರಾತನ ಕಾಲದಿಂದಲೂ ಮನುಷ್ಯ ತನ್ನದೇ ಆದ ಒಂದು ನೆಲೆಗಟ್ಟಿನಡಿಯಲ್ಲಿ ಬದುಕನ್ನು ರೂಪಿಸಿಕೊಂಡು ಆ ವ್ಯವಸ್ಥೆಯಡಿಯಲ್ಲಿ ಬದುಕುತ್ತಾನೆ. ಈ ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಳ್ಳಲು ಇರುವ ವ್ಯವಸ್ಥೆಯೇ ಧರ್ಮ. ಧರ್ಮದಲ್ಲಿ ಜಾತಿ ಎಂಬ ವ್ಯವಸ್ಥೆ ರೂಪಿತವಾಗಿದೆ. ಜಾತಿ ಎಂಬ ವ್ಯವಸ್ಥೆಯನ್ನು ಯಾರೂ ನಿರ್ಧರಿಸಿದ್ದಲ್ಲ. ನಾವು ಎಲ್ಲಿ ಹುಟ್ಟುತ್ತೇವೆಯೋ, ಯಾವ ಜಾತಿ ಜನಾಂಗದಲ್ಲಿ ಹುಟ್ಟುತ್ತೇವೆಯೋ ಎಂದು ಯಾರೂ ನಿರ್ಧರಿಸಿಲ್ಲ. ಹುಟ್ಟು ಆಕಸ್ಮಿಕ. ನಾವು ಎಲ್ಲಿ ಹುಟ್ಟುತ್ತೇವೆಯೋ ಅಲ್ಲಿನ ವ್ಯವಸ್ಥೆಗೆ ಜೀವನವನ್ನು ರೂಪಿಸಿಕೊಂಡು ಬರುತ್ತೇವೆ. ಮನುಷ್ಯ ಭೂಮಂಡಲದಲ್ಲಿ ಅತ್ಯಂತ ಶ್ರೇಷ್ಠ ಬುದ್ಧಿ ಜೀವಿ. ಇತರ ಪ್ರಾಣಿ-ಪಕ್ಷಿಗಳಿಗಿಂತ ಶಿಸ್ತುಬದ್ಧ ಜೀವನವನ್ನು ರೂಪಿಸಿ ಕೊಂಡಿದ್ದಾನೆ. ಇಂದಿನ ಅವನ ಅತಿ ಬುದ್ಧಿವಂತಿಕೆಯಿಂದಾಗಿ ಈ ವ್ಯವಸ್ಥೆಗೆ ಮಾರಕವಾಗುತ್ತಿದೆ.
ಧರ್ಮದಲ್ಲಿ ದೇವರು ಎಂಬ ವಿಷಯ ತುಂಬಾ ಪ್ರಾಮುಖ್ಯತೆ ಪಡೆದಿದೆ. ಕೆಲವರು ದೇವರನ್ನು ನಂಬುತ್ತಾರೆ. ಇನ್ನು ಕೆಲವರು ನಂಬುವುದಿಲ್ಲ. ಅದು ಅವರವರ ವಿವೇಚನೆಗೆ ಬಿಟ್ಟದ್ದು. ಪ್ರತಿಯೊಂದು ಜಾತಿಗೂ ಅವರವರ ಸಂಪ್ರದಾಯಕ್ಕೆ ತಕ್ಕಂತೆ ದೇವರುಗಳನ್ನು ನಂಬುತ್ತಾರೆ. ಆದರೆ ಇಲ್ಲಿ ಮುಖ್ಯವಾದ ವಿಷಯವೇನೆಂದರೆ ಧರ್ಮದ ವಿಷಯದಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಎಷ್ಟು ಸರಿ ಎನ್ನುವುದು. ಇತ್ತೀಚೆಗೆ ಶಬರಿಮಲೆಯ ವಿಷಯದಲ್ಲಿ ನಡೆದ ಘಟನೆಗಳಂತಹ ವಿಷಯಗಳನ್ನು ಸಮಾಜದಲ್ಲಿ ಚಿಂತನೆ ಅವಶ್ಯಕ. ಪ್ರತಿಯೊಂದು ಧರ್ಮಕ್ಕೂ ಜಾತಿಗೂ ಒಂದೊಂದು ದೇವರಿದ್ದಾನೆ. ಪ್ರತಿಯೊಂದು ಆಚರಣೆಯೂ ವಿಭಿನ್ನವಾಗಿರುತ್ತದೆ. ವ್ಯವಸ್ಥೆಗಳು ಪುರಾತನ ಕಾಲದಿಂದಲೂ ಆಚರಣೆಗಳು ಇರುತ್ತದೆ. ಇಂತಹ ಆಚರಣೆಗಳು ಸಂಸ್ಕøತಿಗಳು ಆ ಪ್ರದೇಶದ ಪ್ರಾಕೃತಿಕ ನೆಲಗಟ್ಟಿನಡಿಯಲ್ಲಿ ರೂಪಿತವಾಗಿರುತ್ತದೆ. ದೇವಾಲಯದ, ಧರ್ಮದ ಸಂಸ್ಕøತಿಯ ಎಲ್ಲಾ ವಿಷಯಗಳನ್ನು ಕಾನೂನಿನ ಚೌಕಟ್ಟಿನಡಿಯಲ್ಲಿ ಚರ್ಚಿಸುತ್ತಾ ಹೋದಾಗ ಅದರ ಮೂಲ ಸ್ವರೂಪಕ್ಕೆ ಧಕ್ಕೆ ಉಂಟಾಗುತ್ತದೆ. ಆದರೆ ಕೆಲವು ಆಚರಣೆಗಳನ್ನು, ಪದ್ಧತಿಗಳ ವಿಷಯದಲ್ಲಿ ವೈಜ್ಞಾನಿಕ ರೀತಿಯ ಚಿಂತನೆಗಳ ಅವಶ್ಯಕತೆ ಇದೆ. ಇದು ಶಬರಿಮಲೆ ವಿಷಯದಲ್ಲಿ ನ್ಯಾಯಾಲಯದ ತೀರ್ಪಿನ ಚರ್ಚೆ ಸಮಾಜದಲ್ಲಿ ನಡೆಯುತ್ತಿದೆ. ಇಂತಹ ಕಟ್ಟುಪಾಡುಗಳು ಶಬರಿಮಲೆಗೆ ಮಾತ್ರವಲ್ಲ. ದೇಶದ ಎಲ್ಲಾ ದೇವಸ್ಥಾನಗಳಲ್ಲಿ ಧರ್ಮಗಳಲ್ಲಿ ಅದರದ್ದೇ ಆದ ಆಚರಣೆಗಳಿವೆ. ಇಂತಹ ವ್ಯವಸ್ಥೆಗಳು ನಾವು ಒಂದು ಚೌಕಟ್ಟಿನಡಿಯಲ್ಲಿ ಬದುಕುವ ವ್ಯವಸ್ಥೆ ರೂಪಿಸುತ್ತದೆ. ಆದರೆ ಇಂದು ಇಂತಹ ವ್ಯವಸ್ಥೆಗಳು ನಾಗರಿಕತೆಯ ಭರಾಟೆಯಲ್ಲಿ, ಆಧುನಿಕತೆಯ ಮೆರಗಿನಡಿಯಲ್ಲಿ ಮೂಲ ಸಂಪ್ರದಾಯಗಳನ್ನು ಗಾಳಿಗೆ ತೂರಲಾಗುತ್ತಿದೆ.
ಶಬರಿಮಲೆ ಸೇರಿ ಅನೇಕ ಕ್ಷೇತ್ರಗಳಲ್ಲಿ ಅನೇಕ ಕಟ್ಟುಪಾಡುಗಳನ್ನು ದೇವಾಲಯದವರು ವಿಧಿಸಿರುತ್ತಾರೆ. ಅಂತಹ ಕಟ್ಟುಪಾಡುಗಳನ್ನು ಭಕ್ತಾದಿಗಳು ಪಾಲಿಸುತ್ತಿದ್ದಾರೆಯೇ ಎಂಬುದು ಮುಖ್ಯ. ಇಂದು ಶಬರಿಮಲೆಗೆ ಹೋಗುವ ಭಕ್ತರು 48 ದಿನಗಳ ವ್ರತ ಪಾಲಿಸಬೇಕು. ಇರುಮುಡಿ ಹೊತ್ತವರು ಮಾತ್ರ 18 ಮೆಟ್ಟಿಲುಗಳನ್ನು ಹತ್ತಬೇಕು. ಇಂತಹ ಕಟ್ಟುಪಾಡುಗಳಿವೆ. ಇತರ ಅನೇಕ ಕ್ಷೇತ್ರಗಳಲ್ಲಿ ಇಂತಹದ್ದೇ ಆದ ಕಟ್ಟುಪಾಡುಗಳಿರುತ್ತವೆ. ಆದರೆ ಶೇ. 80 ಜನರು ಇಂತಹ ಕಟ್ಟುಪಾಡುಗಳನ್ನು ಪಾಲಿಸುವುದಿಲ್ಲ. ಇಂದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ಭಕ್ತಿಯಿಂದಲ್ಲ. ಇದು ಒಂದು ರೀತಿಯ ಫ್ಯಾಶನ್ ಆಗಿದೆ. ದೇವಸ್ಥಾನಗಳ ಕಟ್ಟುಪಾಡುಗಳನ್ನು ಅಕ್ಷರಶಃ ಪಾಲಿಸಿದರೆ ಭಕ್ತಾದಿಗಳ ಸಂಖ್ಯೆ ಶೇ. 10ಕ್ಕೆ ಇಳಿಯುತ್ತದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಬಂದಿದೆ. ದೇವರು, ದೇವಾಲಯಗಳು ಕೂಡ ಆಧುನಿಕತೆಯ ಭರಾಟೆಯಡಿಯಲ್ಲಿ ಸಿಲುಕಿ ನಲುಗಿ ಹೋಗಿದೆ. ದೇವರಿಗೆ ಆಧುನಿಕತೆಯ ಮೆರುಗು ಸ್ಪರ್ಶವಾಗಿದೆ. ಹೈಟೆಕ್ ದೇವಾಲಯಗಳು, ಆಚರಣೆಗಳು ತರತರಹದ ಅಭಿಷೇಕಗಳು, ಅಲಂಕಾರಗಳು, ಆಭರಣಗಳು, ಜನರ ಆರ್ಥಿಕ ಸ್ಥಿತಿಯನ್ನು ಆಧರಿಸಿ ನಡೆಸುವ ಪೂಜೆಗಳು ಪ್ರಾರಂಭವಾಗಿದೆ. ಅದರೊಡನೆ ವಿಭಿನ್ನ ಮುಖವಾಡಗಳು ದೇವರಿಗೆ ಧರಿಸಿ ಬಿಡುತ್ತಾರೆ.
ದೇವಾಲಯಗಳ ಪ್ರವೇಶ, ಪೂಜೆ, ಆಚರಣೆಗಳು ಒಂದು ರೀತಿಯ ಫ್ಯಾಶನ್ ಆಗಿದೆ. ಹಿಂದೆ ಕಾಶಿ ಯಾತ್ರೆ, ಕೈಲಾಸ ಯಾತ್ರೆ, ಅಮರನಾಥ ಯಾತ್ರೆಗಳಿಗೆ ಒಂದು ಪ್ರಾಮುಖ್ಯತೆ ಇತ್ತು. ಇಂದು ಅದೆಲ್ಲಾ ಬದಲಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ನಾಗರಿಕತೆಯ ಬೆಳವಣಿಯಲ್ಲಿ ಆಚರಣೆಗಳು ನಮಗೆ ಕಷ್ಟಸಾಧ್ಯವಾಗುವುದು.
ಆದರೆ ಮೂಲ ಸ್ವರೂಪಕ್ಕೆ ಧಕ್ಕೆ ಬರದ ರೀತಿಯಲ್ಲಿ ನಾವು ದೇವಾಲಯಗಳ ವಿಷಯದಲ್ಲಿ ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದು ದೇವಸ್ಥಾನಗಳು ಪ್ರಾದೇಶಿಕ, ಭೌಗೋಳಿಕ ಹಿನ್ನೆಲೆಯ ಆಧಾರದಲ್ಲಿ ಕಾರ್ಯ ನಿರ್ವಹಿಸುವುದರಿಂದ ಮತ್ತು ಅದಕ್ಕೆ ಪೂರಕವಾಗಿ ಆಚರಣೆಗಳು ಜಾರಿಯಲ್ಲಿರುವುದರಿಂದ ನಾವು ಅದಕ್ಕೆ ತಲೆಬಾಗಬೇಕು.
“ಧರ್ಮವನ್ನು ಧರ್ಮವನ್ನಾಗಿ ಉಳಿಸಬೇಕೇ ಹೊರತು ಅದನ್ನು ಸ್ವಪ್ರತಿಷ್ಠೆಯ ವಿಷಯವನ್ನಾಗಿಸಿ ಕೊಳ್ಳಬಾರದು. ಇಲ್ಲಿ ಜನರ ಭಾವನೆಗಳಿಗೆ ಒತ್ತು ನೀಡುವ ಕೆಲಸವಾಗಬೇಕು ಮತ್ತು ಅತಿರೇಕದ ಆಚರಣೆಗಳಿಗೂ ಕಡಿವಾಣದ ಅವಶ್ಯಕತೆಯಿದೆ”.
- ಬಾಳೆಯಡ ಕಿಶನ್ ಪೂವಯ್ಯ, ವಕೀಲರು-ನೋಟರಿ, ಮಡಿಕೇರಿ.