ಮಡಿಕೇರಿ, ಅ. 20: ನಗರಸಭೆ ಮೂರು ಪ್ರಾಥಮಿಕ ಶಾಲೆಗಳ ಗೌರವ ಶಿಕ್ಷಕರಿಗೆ ಅನೇಕ ಸಮಯದಿಂದ ತಾನು ವಿದ್ಯಾರ್ಥಿಗಳ ಹಿತಕ್ಕಾಗಿ ಕೈಯಿಂದ ಸಂಭಾವನೆ ನೀಡುತ್ತಿದ್ದು, ಈ ಬಗ್ಗೆ ಅಗತ್ಯ ಕ್ರಮಕ್ಕೆ ಸೂಚಿಸುವಂತೆ ನಗರಸಭಾ ಸದಸ್ಯ ಕೆ.ಜಿ. ಪೀಟರ್ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ. ತಾ. 17 ರಂದು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಗಮನ ಸೆಳೆದಿದ್ದಾರೆ. ಸಾರಾಂಶ ಇಂತಿದೆ.

ಮಡಿಕೇರಿ ನಗರಸಭೆ ಅಧೀನದಲ್ಲಿ ಕನ್ನಡ ಹಿರಿಯ ಪ್ರಾಥಮಿಕ ಮೂರು ಶಾಲೆಗಳಿವೆ. ಈ ಮೂರು ಶಾಲೆಗಳಲ್ಲಿ ಸುಮಾರು 150 ಹಿಂದುಳಿದ, ಬಡವರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ವೇತನ ಪಡೆಯುವ ನಾಲ್ವರು ಮತ್ತು ಗೌರವ ವೇತನಕ್ಕಾಗಿ ಕರ್ತವ್ಯ ನಿರ್ವಹಿಸುವ 9 ಶಿಕ್ಷಕರು ತಮ್ಮ ದೈನಂದಿನ ಪಾಠ ಪ್ರವಚನಗಳಲ್ಲಿ ತೊಡಗಿದ್ದಾರೆ. ಈ ಶಿಕ್ಷಕರು ಯಾವದೇ ರೀತಿಯ ವೇತನಗಳಿಲ್ಲದೆ 10-15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ತಾನು ಸ್ವತಃ ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 150 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು, ಕನ್ನಡ ಶಾಲೆಗಳು ಮುಚ್ಚಬಾರದೆಂದು ಶಿಕ್ಷಕರ ಬದುಕಿನ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸ್ವತಃ ಒಬ್ಬೊಬ್ಬರಿಗೆ ರೂ. 1 ಸಾವಿರದಿಂದ ರೂ. 2 ಸಾವಿರಗಳಂತೆ ಮಾಸಿಕ ಒಟ್ಟು ರೂ. 13 ಸಾವಿರಗಳಂತೆ ನೀಡುತ್ತಿದ್ದೇನೆ.

ಈ ಹಣವನ್ನು ನನ್ನ ದುಡಿತದಲ್ಲಿ ಈ ಶಿಕ್ಷಕರಿಗೆ ನೀಡಿ ಶಿಕ್ಷಕರ ಬದುಕಿಗೆ ಆಶ್ರಯವಾಗುವ ನಿಟ್ಟಿನಲ್ಲಿ ಆರ್ಥಿಕ ನೆರವನ್ನು ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದೇನೆ.

ಈ ಬಗ್ಗೆ ನಗರಸಭೆಯ ಮಾಸಿಕ ಸಭೆಯಲ್ಲಿ ಹಲವು ಬಾರಿ ಚರ್ಚೆಯಾದರೂ ಇದುವರೆಗೆ ಯಾವದೇ ಸ್ಪಂದನ ಸಿಗಲಿಲ್ಲ. ಶಿಕ್ಷಣ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಅಲ್ಲದೆ ಶಿಕ್ಷಣ ಸಚಿವರ ಗಮನಕ್ಕೆ ಖುದ್ದಾಗಿ ತಂದರೂ ಅಗತ್ಯ ಸ್ಪಂದನ ಸಿಗಲಿಲ್ಲ.

ಆದ್ದರಿಂದ ಮಕ್ಕಳ ಶಿಕ್ಷಣ ಮುಂದುವರೆಯುವ, ಕನ್ನಡ ಶಾಲೆ ಉಳಿಯುವ ಮತ್ತು ಶಿಕ್ಷಕರ ಬದುಕಿನ ಸ್ಥಿತಿಯನ್ನು ಅರ್ಥೈಸಿಕೊಂಡು ಸರಕಾರದಿಂದ ವೇತನ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಪೀಟರ್ ಗಮನ ಸೆಳೆದಿದ್ದಾರೆ.