ಸುಂಟಿಕೊಪ್ಪ, ಅ. 20: ಶಾಂತಿ ಸೌಹಾರ್ಧತೆಯಿಂದ ಆಯುಧ ಪೂಜಾ ಕಾರ್ಯಕ್ರಮವನ್ನು ನಡೆಸುತ್ತಾ ಅತಿವೃಷ್ಠಿಯಿಂದ ನೊಂದವರಿಗೆ ಸಹಾಯ ಹಸ್ತ ನೀಡಲು ಮುಂದಾಗಿರುವ ವಾಹನ ಚಾಲಕರ ಸಂಘದ ಸೇವಾ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆಣ್ಣೇಕರ್ ಹೇಳಿದರು.

ಇಲ್ಲಿನ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ಆಯೋಜಿಸಲಾದ ಆಯುಧ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಗಸ್ಟ್‍ನಲ್ಲಿ ಬಂದ ಮೇಘಾಸ್ಫೋಟ ಜಲ ಪ್ರಳಯದಿಂದ ಕೊಡಗಿನ ಹಲವರ ಬದುಕು ತತ್ತರವಾಗಿದೆ. ಸುಂಟಿಕೊಪ್ಪ ನಾಗರಿಕರು ಸಂತ್ರಸ್ತರಿಗೆ ಸಹಾಯ ಸಹಕಾರ ನೀಡಿದ್ದಾರೆ. ಹಾಗೆಯೇ ಪುಟ್ಟ ಮಕ್ಕಳ ನೃತ್ಯ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿದ್ದು ಮಾದರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಸನ ಗ್ರಾಹಕರ ವಾಜ್ಯ ವೇದಿಕೆಯ ಅಧ್ಯಕ್ಷ ಎ. ಲೋಕೇಶ್ ಕುಮಾರ್ ಆಯುಧಪೂಜೆ ಕಾರ್ಯಕ್ರಮ ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸಿದ್ದು, ಅತಿವೃಷ್ಠಿಯಿಂದ ನೊಂದವರಿಗೆ ನೆರವು ನೀಡಲು ಪ್ರಯತ್ನಿಸಿದ್ದು ಅರ್ಥಪೂರ್ಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಪ್ರಕೃತಿ ವಿಕೋಪದಿಂದ ಈ ವರ್ಷ ಸರಳವಾಗಿ ಆಯುಧಪೂಜೆಯನ್ನು ನಡೆಸಲಾಗುತ್ತಿದೆ. 48 ವರ್ಷದಿಂದ ಅದ್ಧೂರಿಯಾಗಿ ನಡೆಸುತ್ತಿರುವ ಆಯುಧಪೂಜೆಯಲ್ಲಿ ಈ ವರ್ಷ ವಿಶೇಷತೆ ಇದೆ. ನಿರಾಶ್ರಿತರಿಗೆ ನೆರವು ನೀಡುವ ಯೋಜನೆ ಮೆಚ್ಚುವಂತದ್ದು, ಹಾಗೆಯೇ ಇಲ್ಲಿನ ಜನರಿಗೆ ಅನುಕೂಲವಾಗಲು ಕುಶಾಲನಗರದಲ್ಲಿ ತಹಶೀಲ್ದಾರ್ ಕಚೇರಿ ಹಾಗೂ ಆಹಾರ ಇಲಾಖೆಯ ಶಾಖೆಯು ಸದ್ಯದಲ್ಲೇ ಆರಂಭಿಸಲಾಗುವದು ಎಂದು ಹೇಳಿದರು. ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಮಾತನಾಡಿ, ಸುಂಟಿಕೊಪ್ಪ ನಾಗರಿಕರು ಅತಿವೃಷ್ಠಿಯಿಂದ ಕಂಗಾಲಾದ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಸಹಾಯ, ಊಟೋಪಚಾರ ನೀಡಿ ಮಾನವೀಯ ಮೌಲ್ಯಗಳಿಗೆ ಗೌರವ ನೀಡಿದೆ ಎಂದು ಹೇಳಿದರು.

ಡಿವೈಎಸ್‍ಪಿ ಮುರುಳೀಧರ್ ಮಾತನಾಡಿ, ಸುಂಟಿಕೊಪ್ಪ ಜನತೆಯು ನಿರಾಶ್ರಿತರಿಗೆ ನೀಡಿದ ಸಹಾಯ ಎಲ್ಲರು ನೆನಪಿಸುವಂಥದ್ದು ಎಂದು ಹೇಳಿದರು. ಮಾಜಿ ಜಿ.ಪಂ. ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ಸುಂಟಿಕೊಪ್ಪ ಆಯುಧ ಪೂಜೆಯನ್ನು ವಾಹನ ಚಾಲಕರ ಸಂಘದವರು ವೈಶಿಷ್ಟತೆಯಿಂದ ಜಾತ್ಯತೀತ ನಿಲುವಿನಿಂದ ಎಲ್ಲಾ ಧರ್ಮದವರು ಸೇರಿ 48 ವರ್ಷದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಸೇವಾ ಮನೋಭಾವನೆಯಿಂದ ಮಾಡುವ ಕೆಲಸಕ್ಕೆ ಎಲ್ಲರೂ ಬೆಂಬಲ ನೀಡಿದ್ದಾರೆ. ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆ ಕಾಮಗಾರಿಗೆ ಅಪಸ್ವರ ವ್ಯಕ್ತಪಡಿಸಿದ್ದು ಸರಿಯಲ್ಲ. ಅಭಿವೃದ್ಧಿ ದೃಷ್ಟಿಯಿಂದ ಇದಕ್ಕೆ ಜನರು ಬೆಂಬಲ ನೀಡಬೇಕೆಂದು ಕರೆನೀಡಿದರು.

ಪ್ರಕೃತಿ ವಿಕೋಪದಿಂದ ನೆರಹಾವಳಿಗೆ ಸಿಲುಕಿ ಮನೆ-ಮಠ ಕಳೆದುಕೊಂಡಿರುವ ನಿರಾಶ್ರಿತರಿಗೆ 1 ಏಕರೆ ಜಾಗವನ್ನು ಉದಾರವಾಗಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಅವರಿಗೆ ವಾಹನ ಚಾಲಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ. ಉಸ್ಮಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದ ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಸದಸ್ಯರುಗಳಾದ ಎಂ. ನಾಗರತ್ನ ಸುರೇಶ್, ಎಸ್. ಜ್ಯೋತಿ ಬಾಸ್ಕರ್, ಕೆ.ಎನ್. ರತ್ನ, ಕೆ.ಇ. ಕರೀಂ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಇ. ಮ್ಯಾಥ್ಯು, ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ, ಮಾಜಿ ಅಧ್ಯಕ್ಷ ಅಚ್ಚುಪ, ಕುಶಾಲನಗರದ ಉದ್ಯಮಿ ಮೊಯಿದು ಮತ್ತಿತರರು ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಒಟ್ಟು ಐವರು ನಿರಾಶ್ರಿತರಿಗೆ ಸಂಘದ ವತಿಯಿಂದ ನೆರವಿನ ಚೆಕ್ ಅನ್ನು ವಿತರಿಸಲಾಯಿತು. ಠಾಣಾಧಿಕಾರಿ ಜಯರಾಂ ನೃತ್ಯ ತಂಡಗಳಿಗೆ ಬಹುಮಾನ ವಿತರಿಸಿದರು.

ಮನಸೂರೆಗೊಂಡ ಸಾಂಸ್ಕøತಿಕ ಕಾರ್ಯಕ್ರಮ

ನೃತ್ಯ ಮಯೂರಿ ನೃತ್ಯಾಲಯ, ಸುಂಟಿಕೊಪ್ಪ ನಾಟಿ ಕಿಡ್ಸ್ ಯುನೈಟೆಡ್ ಕ್ರೀಯೇಟಿವ್ ತಂಡಗಳು ನಡೆಸಿಕೊಟ್ಟ ವಿವಿಧ ನೃತ್ಯ ಪ್ರದರ್ಶನ ಅದ್ಬುತವಾಗಿ ಮೇಳೈಸಿತು. ಮಧ್ಯರಾತ್ರಿಯವರೆಗೆ ವೇದಿಕೆಯಲ್ಲಿ ನೃತ್ಯ ಲೋಕಸೃಷ್ಟಿಯಾಗಿ ಪ್ರೇಕ್ಷಕರ ಮನಸೂರೆಗೊಂಡಿತು. ವಿದುಷಿ ಮಂಜು ಭಾರ್ಗವಿ ಮತ್ತು ಅಶ್ವಿನ್ ಅವರ ಗರಡಿಯಲ್ಲಿ ಪಳಗಿದ ಪುಟಾಣಿ ಪ್ರತಿಭೆಗಳ ನೃತ್ಯ ಚಿತ್ತಾಕರ್ಷಕವಾಗಿದ್ದವು. ಕುಶಾಲನಗರ ನಾದಾಂತ ನೃತ್ಯ ಮಯೂರಿ ತಂಡದ “ಗಿರಿ ನಂದಿನಿ” ಧೂಪಾರತಿ ನೃತ್ಯ, ಆಕರ್ಷಕವಾಗಿ ಮೂಡಿಬಂದು ಜನಮನ ತಣಿಸಿದವು.

ಕುಶಾಲನಗರ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಹೆಚ್. ನೇತ್ರ ಪ್ರಕೃತಿ ವಿಕೋಪ ಕುರಿತು ಜಾನಪದ ಗೀತೆಯನ್ನು ಹಾಡಿದರು. ಭೂತನಕಾಡಿನ ಯುವ ಪ್ರತಿಭೆ ಪ್ರವೀಣ್ ಹಾಡಿದ ಕುಂದಾಲುಂಡ ಕ್ಯಾಮೆ ಕೊಡವ ಗಾಯನಕ್ಕೆ ನಾಟಿ ಕಿಡ್ಸ್ ತಂಡದ ನೃತ್ಯಪಟುಗಳು ಹೆಜ್ಜೆ ಹಾಕಿ ಗಮನ ಸೆಳೆದರು.

ದಿನದ ಅಂಗವಾಗಿ ಪೊಲೀಸ್ ಠಾಣೆ ಮತ್ತು ಸೆಸ್ಕ್ ಕಚೇರಿಗಳು ಅಲಂಕಾರಗೊಂಡು ಆಯುಧಾ ಪೂಜೆಯ ಮೆರೆಗನ್ನು ಹೆಚ್ಚಿಸಿದರೆ ಗ್ರಾ.ಪಂ. ದೀಪಾಲಂಕಾರದಿಂದ ಕಂಗೊಳಿಸಿತು. ಎಂ.ಎ. ಉಸ್ಮಾನ್ ಸ್ವಾಗತಿಸಿ, ಡಿ.ಎಂ. ಮಂಜುನಾಥ್ ನಿರೂಪಿಸಿ, ವಂದಿಸಿದರು.