ರೂ. 15 ಲಕ್ಷ ವೆಚ್ಚದಲ್ಲಿ ನೂತನ ದೇವಾಲಯ
ಸೋಮವಾರಪೇಟೆ, ಅ. 18: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದ ಶ್ರೀ ಅಯ್ಯಪ್ಪ ದೇವಾಲಯವನ್ನು ಪುನರ್ ನಿರ್ಮಿಸುವ ಬಗ್ಗೆ ಗ್ರಾಮಸ್ಥರು ತೀರ್ಮಾನಿಸಿದ್ದು, ರೂ. 15 ಲಕ್ಷ ವೆಚ್ಚದಲ್ಲಿ ನೂತನ ದೇವಾಲಯಕ್ಕೆ ನೀಲನಕ್ಷೆ ಸಿದ್ಧಪಡಿಸಲಾಯಿತು.
ಕಾಜೂರಿನ ಹರಿಹರ ಯುವಕ ಸಂಘದ ಆವರಣದಲ್ಲಿ ದೇವಾಲಯ ನಿರ್ಮಾಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಪ್ರಸ್ತುತ ಇರುವ ದೇವಾಲಯದ ಗರ್ಭ ಗುಡಿಯಿರುವ
ಸ್ಥಳದಲ್ಲಿ ವಿಗ್ರಹದ ಪ್ರತಿಷ್ಠಾಪನೆಯಾಗಿದ್ದು, ಗರ್ಭಗುಡಿಯ ತಳಭಾಗದಲ್ಲಿ ಹಾನಿಯಾಗಿರುವ ಬಗ್ಗೆ ಕೇರಳದ ತಂತ್ರಿಗಳು ತಾಂಬೂಲ ಪ್ರಶ್ನೆಯಲ್ಲಿ ತಿಳಿಸಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎನ್. ಯೋಗೇಶ್ ಸಭೆಯ ಗಮನಕ್ಕೆ ತಂದರು.
ಈ ಸಂದರ್ಭ ನೂತನ ದೇವಾಲಯವನ್ನು ಆದಷ್ಟು ಶೀಘ್ರದಲ್ಲಿ ನಿರ್ಮಿಸುವಂತೆ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ನೂತನ ದೇವಾಲಯ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ತಯಾರಿಸಲಾಗಿದ್ದು, ಸುಮಾರು ರೂ. 15 ಲಕ್ಷ ವೆಚ್ಚವಾಗಲಿದೆ. ಗ್ರಾಮದ ಪ್ರತಿ ಕುಟುಂಬ ಕನಿಷ್ಟ 5 ಸಾವಿರ ದೇಣಿಗೆ ನೀಡುವಂತಾಗಬೇಕು. ಉಳಿದ ಹಣವನ್ನು ದಾನಿಗಳಿಂದ ಭರಿಸುವ ಬಗ್ಗೆ ಸಮಿತಿ ಕಾರ್ಯೋನ್ಮುಖವಾಗಲಿದೆ ಎಂದು ಅಧ್ಯಕ್ಷ ಯೋಗೇಶ್ ತಿಳಿಸಿದರು.
ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಎ.ಕೆ. ಶಿವದಾಸ್, ಖಜಾಂಚಿ ಸುದೇವ, ಆಡಳಿತ ಮಂಡಳಿ ಪದಾಧಿಕಾರಿಗಳಾದ ಟಿ.ಕೆ. ಭಾಸ್ಕರ್, ವಿನೋದ್, ಟಿ.ಆರ್. ವಿಜಯ, ಗೋಪಾಲಕೃಷ್ಣ, ಬಾರನ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.