ವೀರಾಜಪೇಟೆ, ಅ. 18: ಶಿರಸಿಯಲ್ಲಿ ನಡೆದ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರದಲ್ಲಿ ಮಂಗಳೂರು, ಧಾರವಾಡ, ಹಾಸನ, ಉತ್ತರ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ಸುಮಾರು 160 ರೋವರ್ಸ್ ಮತ್ತು ರೇಂಜರ್ಸ್‍ಗಳು ಭಾಗವಹಿಸಿದ್ದ ಶಿಬಿರದಲ್ಲಿ ಕೊಡಗಿನ ರೋವರ್ ತಮ್ಮಯ್ಯ ದ್ವಿತೀಯ ಬಿ.ಕಾಂ ಅವರಿಗೆ ಉತ್ತಮ ರೋವರ್ ಪ್ರಶಸ್ತಿ ಲಭಿಸಿದೆ.

ಇತ್ತೀಚೆಗೆ ಕೊಡಗಿನ ನಿರಾಶ್ರಿತರ ಕೇಂದ್ರದಲ್ಲಿ ಸೇವೆ ಮಾಡಿ ಮೆಚ್ಚುಗೆ ಪಡೆದಿದ್ದ ಈ ಬಾಲಕ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಮೆಟ್(ನಾಯಕ)ಯಾಗಿದ್ದಾನೆ. ರೋವರ್ಸ್ ಅಧಿಕಾರಿ ಮಂದೆಯಂಡ ವನಿತ್ ಕುಮಾರ್ ನೇತೃತ್ವದಲ್ಲಿ 20 ರೋವರ್ಸ್ ಮತ್ತು ರೇಂಜರ್ಸ್‍ಗಳು ಶಿರಸಿ ಶಿಬಿರದಲ್ಲಿ ಭಾಗವಹಿಸಿದ್ದು ಶಿರಸಿಯ ಪ್ರಸಿದ್ಧ ಪ್ರಕೃತಿ ತಾಣ ಯಾಣ ಪರ್ವತ ಹಾಗೂ ಇತರ ಪರ್ವತಗಳನ್ನು ಏರಿದ ರೋವರ್ಸ್ ಮತ್ತು ರೇಂಜರ್ಸ್‍ಗಳು ಅಲ್ಲಿನ ಪ್ರಕೃತಿಯ ಸೌಂದರ್ಯವನ್ನು ಕಣ್ಣು ತುಂಬಿ ಕೊಂಡರು. ಕೊಡಗಿನ ವಿದ್ಯಾರ್ಥಿಗಳಾದ ತಮ್ಮಯ್ಯ, ಸಚ್ಚಿನ್, ನವೀನ್, ಬೋಪಣ್ಣ, ರೋಶನ್, ಕಾರ್ತಿಕ್, ಸರ್ವೇಶ್, ಶಿವು, ಭರತ್, ನಿತಿನ್, ದರ್ಶನ್, ರೇಂಜರ್ಸ್‍ಗಳಾದ ಉತ್ತರ ಬೈರಾಗಿ, ಸುಚಿತ್ರ ಬೈರಾಗಿ, ಸುಮ, ಕಾವ್ಯ, ಸಿಂಧು, ರೋಹಿಣಿ, ಬೇಬಿ, ಅಂಜು, ಸಂಗೀತ ಅವರು ಭಾಗವಹಿಸಿದ್ದ ಈ ಶಿಬಿರದಲ್ಲಿ ಪರ್ವತ ಏರುವಾಗ ಅನುಸರಿಸಬೇಕಾದ ಕ್ರಮ ಮತ್ತು ಪ್ರಥಮ ಚಿಕಿತ್ಸೆ, ಪರಿಸರ ಕುರಿತ ಮಾಹಿತಿ, ಔಷಧ ಸಸ್ಯಗಳ ಮಾಹಿತಿಯನ್ನು ಪಡೆದುಕೊಂಡರು.